ಎಫ್‌ಐಎಚ್ ರ್‍ಯಾಂಕಿಂಗ್‌: ಭಾರತ ತಂಡಗಳ ಜಿಗಿತ ಲಾಸೇನ್‌: ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದುಕೊಂಡಿವೆ. ಪುರುಷರ ತಂಡ ಮೂರು ಮತ್ತು ಮಹಿಳಾ ತಂಡ ಏಳು ಸ್ಥಾನಗಳ ಏರಿಕೆ ಕಂಡಿದೆ. ಈಚೆಗೆ ನಡೆದ ಎಫ್‌ಐಎಚ್‌ ಪ್ರೊ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ಭಾರತ ತಂಡಗಳು ಉತ್ತಮ ಸಾಧನೆ ಮಾಡಿದ್ದವು. ಪುರುಷರ ತಂಡ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ 3–3ರ ಡ್ರಾ ಮತ್ತು 4–3ರ ಜಯ ಸಾಧಿಸಿತ್ತು. ಜರ್ಮನಿ ವಿರುದ್ಧ 3–0 ಹಾಗೂ 3–1ರಿಂದ ಗೆಲುವು ಸಾಧಿಸಿತ್ತು. ಇದು, ನೆದರ್ಲೆಂಡ್ಸ್ ತಂಡವನ್ನು ಹಿಂದಿಕ್ಕಲು ತಂಡಕ್ಕೆ ನೆರವಾಯಿತು. ನೆದರ್ಲೆಂಡ್ಸ್‌ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಮಲೇಷ್ಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಬೆಲ್ಜಿಯಂ ಎರಡನೇ ಸ್ಥಾನ ಗಳಿಸಿದೆ. ಜರ್ಮನಿ, ಅರ್ಜೆಂಟೀನಾ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಕ್ರಮವಾಗಿ ಐದು, ಆರು, ಏಳು ಮತ್ತು ಎಂಟನೇ ಸ್ಥಾನಗಳಲ್ಲಿವೆ. ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಅಗ್ರ ಕ್ರಮಾಂಕದ ನೆದರ್ಲೆಂಡ್ಸ್ ವಿರುದ್ಧ ಜಯ ಗಳಿಸಿದ ಭಾರತದ ಮಹಿಳೆಯರ ತಂಡ ಏಳನೇ ಸ್ಥಾನಕ್ಕೆ ಜಿಗಿದಿದೆ. ಅರ್ಜೆಂಟೀನಾ ಎರಡನೇ ಸ್ಥಾನ ಗಳಿಸಿದ್ದು ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿ, ಇಂಗ್ಲೆಂಡ್‌ ನಾಲ್ಕನೇ ಸ್ಥಾನದಲ್ಲಿದೆ. ಜರ್ಮನಿ ಮತ್ತು ಸ್ಪೇನ್‌ ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳಲ್ಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.