ಪ್ರಶಸ್ತಿ ಮೇಲೆ ಲಕ್ಷ್ಯ, ಸಿಂಧು ಕಣ್ಣು ಮನಿಲಾ, ಪಿಲಿಪ್ಪೀನ್ಸ್: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಅವರು ಮಂಗಳವಾರ ಆರಂಭವಾಗುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಏಷ್ಯಾ ಚಾಂಪಿಯನ್‌ಷಿಪ್ ನಡೆದಿರಲಿಲ್ಲ. 2018ರ ವುಹಾನ್ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದ ಎಚ್‌.ಎಸ್‌. ಪ್ರಣಯ್‌ ಗಾಯದ ಕಾರಣ ಈ ಬಾರಿ ಕಣಕ್ಕಿಳಿಯುತ್ತಿಲ್ಲ. ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಆಡಬೇಕಿದ್ದ ಗಾಯತ್ರಿ ಗೋಪಿಚಂದ್‌ ಮತ್ತು ತ್ರೀಶಾ ಜೋಲಿ ಕೂಡ ಇದೇ ಕಾರಣದಿಂದ ಆಡುತ್ತಿಲ್ಲ. ಇಂಡಿಯಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ, ಜರ್ಮನ್ ಓಪನ್ ಮತ್ತು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿದ್ದ ಲಕ್ಷ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಅವರಿಗೆ ಚೀನಾದ ಲೀ ಸಿ ಫೆಂಗ್ ಸವಾಲು ಎದುರಾಗಿದೆ. ಮಾಜಿ ವಿಶ್ವ ಚಾಂಪಿಯನ್‌, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಇಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಸಿಂಧು, ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಪಾಯ್‌ ಯು ಪೊ ಅವರನ್ನು ಎದುರಿಸುವರು. ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ, ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಮತ್ತು ಸ್ವಿಸ್‌ ಓಪನ್‌ ಟೂರ್ನಿಗಳಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಕಿದಂಬಿ ಶ್ರೀಕಾಂತ್‌, ಟೋಕಿಯೊ ಒಲಿಂಪಿಯನ್‌ ಬಿ.ಸಾಯಿ ಪ್ರಣೀತ್‌, ಲಂಡನ್‌ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ನೆಹ್ವಾಲ್‌, ಆಕರ್ಷಿ ಕಶ್ಯಪ್, ಮಾಳವಿಕಾ ಬಂಸೋಡ್‌ ಕೂಡ ಸಿಂಗಲ್ಸ್ ವಿಭಾಗದಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ, ಎಂ.ಆರ್. ಅರ್ಜುನ್‌– ಧ್ರುವ ಕಪಿಲ, ಕೃಷ್ಣ ಪ್ರಸಾದ್ ಗರಗ, ವಿಷ್ಣುವರ್ಧನ್ ಗೌಡ್ ಕಣಕ್ಕಿಳಿಯಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಭಟ್‌ ಕೆ.– ಶಿಖಾ ಗೌತಮ್‌, ಸಿಮ್ರಾನ್ ಸಿಂಘಿ– ರಿತಿಕಾ ಥಾಕರ್‌, ಮಿಶ್ರ ಡಬಲ್ಸ್‌ನಲ್ಲಿ ವೆಂಕಟ್‌ ಗೌರವ್ ಪ್ರಸಾದ್‌– ಜೂಹಿ ದೇವಾಂಗಣ್‌, ಇಶಾನ್‌ ಭಟ್ನಾಗರ್‌– ತನಿಶಾ ಕ್ರಾಸ್ಟೊ ಆಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.