ಗಾಲ್ಫ್‌: ಜಂಟಿ ಮೂರನೇ ಸ್ಥಾನಕ್ಕೇರಿದ ಅದಿತಿ ಕ್ಲಿಫ್ಟನ್‌, ನ್ಯೂಜೆರ್ಸಿ: ಉತ್ತಮ ಪ್ರದರ್ಶನ ಮುಂದುವರಿಸಿದ ಬೆಂಗಳೂರಿನ ಅದಿತಿ ಅಶೋಕ್‌ ಅವರು ಎಲ್‌ಪಿಜಿಎ ಟೂರ್‌ ಫೌಂಡರ್ಸ್‌ ಕಪ್‌ ಗಾಲ್ಫ್‌ ಟೂರ್ನಿಯ ಎರಡನೇ ಸುತ್ತಿನ ಬಳಿಕ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಇಲ್ಲಿನ ಅಪ್ಪರ್‌ ಮಾಂಟ್‌ಕ್ಲೇರ್‌ ಕಂಟ್ರಿ ಕ್ಲಬ್‌ ಕೋರ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ಎರಡನೇ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಅವರು 68 ಸ್ಟ್ರೋಕ್‌ಗಳನ್ನು ತೆಗೆದುಕೊಂಡರು. ಮೊದಲ ಸುತ್ತಿನಲ್ಲಿ 69 ಸ್ಟ್ರೋಕ್‌ಗಳನ್ನು ತೆಗೆದುಕೊಂಡಿದ್ದ ಅವರು ಒಟ್ಟು 137 ಸ್ಕೋರ್‌ ಹೊಂದಿದ್ದಾರೆ. ಆಸ್ಟ್ರೇಲಿಯಾದ ಸಾರಾ ಕೆಂಪ್‌ (71, 65) ಮತ್ತು ಕೊರಿಯಾದ ಕೊ ಜಿನ್‌ ಯಾಂಗ್‌ (68, 68) ಅವರು ತಲಾ 136 ಸ್ಕೋರ್‌ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಿನ್‌ಜೀ ಲೀ (68, 69) ಮತ್ತು ಕೊರಿಯಾದ ರ್‍ಯು ಹಾಯೆ ರಾನ್‌ (67, 70) ಅವರು ಅದಿತಿ ಜತೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಕಳೆದ ಏಳು ವರ್ಷಗಳಿಂದ ಎಲ್‌ಪಿಜಿಎ ಟೂರ್‌ನಲ್ಲಿ ಸ್ಪರ್ಧಿಸುತ್ತಿರುವ ಅದಿತಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಇಲ್ಲಿ ಕೊನೆಯ ಎರಡು ಸುತ್ತುಗಳಲ್ಲಿ ನಿಖರ ಪ್ರದರ್ಶನ ನೀಡಿದರೆ ಚೊಚ್ಚಲ ಪ್ರಶಸ್ತಿ ಜಯಿಸುವ ಅವಕಾಶವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.