ಖೇಲೊ ಇಂಡಿಯಾ ವಾರ್ಸಿಟಿ ಕ್ರೀಡಾಕೂಟ: ವಿಘ್ನೇಶ್, ದ್ಯುತಿ ಚಿನ್ನದ ‘ಹೊನಲು’ ಬೆಂಗಳೂರು: ಬೆಳದಿಂಗಳನ್ನು ಹೋಲುವ ಬೆಳಕಿನ ಹೊನಲಿನಲ್ಲಿ ಒಲಿಂಪಿಯನ್‌, ಕಳಿಂಗ ವಿಶ್ವವಿದ್ಯಾಲಯದ ದ್ಯುತಿ ಚಾಂದ್ ಮತ್ತು ಮಂಗಳೂರು ವಿಶ್ವವಿದ್ಯಾಲಯದ ವಿಘ್ನೇಶ್ ಮಿಂಚಿನ ಸಂಚಾರ ಮೂಡಿಸಿದರು. ಹೊಸ ಸಿಂಥೆಟಿಕ್‌ ಅಳವಡಿಸಿರುವ ಕಂಠೀರವ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಶನಿವಾರ ರಾತ್ರಿ ನಡೆದ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ 100 ಮೀಟರ್ಸ್ ಓಟದಲ್ಲಿ ಅವರು ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದ ಚಿನ್ನದ ಪದಕಕ್ಕೆ ಮುತ್ತನ್ನಿತ್ತರು. 10.50 ಸೆಕೆಂಡುಗಳಲ್ಲಿ ಗುರಿ ತಲುಪಿದ ವಿಘ್ನೇಶ್ ಕೂಟ ದಾಖಲೆ ಬರೆದರು. ಪ್ರಮುಖ ಕೂಟಗಳಲ್ಲಿ ಇದು ಅವರ ಮೊದಲ ಚಿನ್ನ. ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿದೆ. ಜಿದ್ದಾಜಿದ್ದಿಯ ಸ್ಪರ್ಧೆಯಲ್ಲಿ ಅಂತಿಮ 20 ಮೀಟರ್ ಇದ್ದಾಗ ವೇಗ ಹೆಚ್ಚಿಸಿಕೊಂಡ ವಿಘ್ನೇಶ್‌ ಚಿನ್ನದ ನಗೆ ಸೂಸಿದರು. ದ್ಯುತಿ ಚಾಂದ್ ಆರಂಭದಿಂದಲೇ ಮುನ್ನಡೆ ಸಾಧಿಸಿದ್ದರು. ಹೀಗಾಗಿ ಪ್ರಯಾಸವಿಲ್ಲದೆ ಮೊದಲಿಗರಾಗಿ ಗುರಿ ಮುಟ್ಟಿದರು. ಇದಕ್ಕೂ ಮೊದಲು ನಡೆದ ಮಹಿಳೆಯರ 1500 ಮೀಟರ್ಸ್ ರೋಚಕ ಓಟದಲ್ಲಿ ಮಂಗಳೂರು ವಿವಿಯ ರಾಧಾ ಸಿಂಗ್ ಚಿನ್ನ ಗೆದ್ದರು. ಪ್ರತಿಸ್ಪರ್ಧಿಗಳನ್ನು ಅಂತಿಮ ಕ್ಷಣಗಳಲ್ಲಿ ಹಿಂದಿಕ್ಕಿದ ಅವರು ಪ್ರೇಕ್ಷಕರನ್ನು ರಂಜಿಸಿದರು. ಪೆರಿಯಾರ್ ವಿವಿಯ ಕವಿತಾ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರು. ನಂತರ ಹಿಮಾಚಲಪ್ರದೇಶದ ಸುನಿತಾ ಮತ್ತು ಕವಿತಾ ನಡುವೆ ಸ್ಪರ್ಧೆ ಏರ್ಪಟ್ಟಿತು. ಕೊನೆಯ 100 ಮೀಟರ್ ಇದ್ದಾಗ ರಾಧಾ ಮುನ್ನೆಲೆಗೆ ಬಂದರು. 50 ಮೀಟರ್ ಬಾಕಿ ಇದ್ದಾಗ ಮಿಂಚಿನ ವೇಗದಲ್ಲಿ ಮುನ್ನುಗ್ಗಿ 4 ನಿಮಿಷ 31.43 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಪೆರಿಯಾರ್‌ ವಿವಿಯ ಪವಿತ್ರಾ ವೆಂಕಟೇಶ್‌ ಪೋಲ್‌ವಾಲ್ಟ್‌ನಲ್ಲಿ 4.01 ಮೀ ಎತ್ತರದ ಸಾಧನೆಯೊಂದಿಗೆ ಕೂಟ ದಾಖಲೆ ಬರೆದು ಚಿನ್ನ ಗೆದ್ದರು. ಜೈನ್‌ ವಿವಿಯ ಸತ್ಯ ಮತ್ತು ರಾಜೇಂದ್ರ ವಿವಿಯ ಬಬಿತಾ ಪಟೇಲ್‌ ಕಂಚು ಗಳಿಸಿದರು. ಡಿಸ್ಕಸ್‌ ಎಸೆತದಲ್ಲಿ ಲವ್ಲಿ ಪ್ರೊಫೆಷನಲ್‌ ವಿವಿಯ ಅಭಿನವ್‌ 54.46 ಮೀ ದೂರದ ಸಾಧನೆ ಮಾಡಿ ಕೂಟ ದಾಖಲೆ ಬರೆದರು. ಕೂಟದ ಮೊದಲ ಚಿನ್ನ ಆರಿಫ್‌ಗೆ ಅಥ್ಲೆಟಿಕ್ಸ್‌ನ ಮೊದಲ ಚಿನ್ನ ಉತ್ತರಪ್ರದೇಶದ ಜನನಾಯಕ್ ಚಂದ್ರಶೇಖರ್ ವಿವಿಯ ಆರಿಫ್ ಅಲಿ ಖಾನ್ ಅವರ ಪಾಲಾಯಿತು. ಪುರುಷರ 10 ಸಾವಿರ ಮೀಟರ್ಸ್ ಓಟದಲ್ಲಿ ಅವರು ಚಿನ್ನ ಗೆದ್ದರು. 30 ನಿಮಿಷ 26.40 ಸೆಕೆಂಡುಗಳಲ್ಲಿ ಅವರು ಗುರಿಮುಟ್ಟಿದರು. ಅಖಿಲ ಭಾರತ ವಾರ್ಸಿಟಿ ಕೂಟದಲ್ಲಿ ಚಿನ್ನ ಗೆದ್ದ ಆದೇಶ್ ಯಾದವ್‌ ಅನುಪಸ್ಥಿತಿಯಲ್ಲಿ ಆರಿಫ್ ಚಿನ್ನ ಗೆಲ್ಲುವ ನೆಚ್ಚಿನ ಅಥ್ಲೀಟ್ ಆಗಿದ್ದರು. ಉತ್ತರಪ್ರದೇಶದ ನೆಹರು ಗ್ರಾಮ್ ಭಾರತಿ ವಿವಿಯ ರೋಹಿತ್ 31 ನಿಮಿಷ 33.11 ಸೆಕೆಂಡುಗಳಲ್ಲಿ ಮತ್ತು ಮಹರ್ಷಿ ದಯಾನಂದ ಸಾಗರ್ ವಿವಿಯ ಹರೀಶ್ 31 ನಿಮಿಷ 33.14ಸೆಕೆಂಡುಗಳಲ್ಲಿ ಗುರಿ ತಲುಪಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು. ಇದರ ಬೆನ್ನಲ್ಲೇ ನಡೆದ ಮಹಿಳೆಯರ 10 ಸಾವಿರ ಮೀಟರ್ಸ್ ಓಟದಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಮಂಗಳೂರು ವಿವಿ ಅಥ್ಲೆಟಿಕ್ಸ್‌ನ ಪದಕ ಬೇಟೆ ಆರಂಭಿಸಿತು. ಬೆಂಗಳೂರು ಸಾಯ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಕೆ.ಎಂ. ಲಕ್ಷ್ಮಿ 35 ನಿಮಿಷ 49.23 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ತ್ರೀವ್ರ ಪೈಪೋಟಿ ನೀಡಿದ ಮಹರ್ಷಿ ದಯಾನಂದ ವಿವಿಯ ಭಾರತಿ ಮತ್ತು ಬಧೊ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಭಾರತಿ 36 ನಿಮಿಷ 20.25 ಸೆಕೆಂಡುಗಳಲ್ಲಿ ಗುರಿ ಸೇರಿದರೆ ಬಧೋ 36 ನಿಮಿಷ 44.40 ಸೆಕೆಂಡು ತೆಗೆದುಕೊಂಡರು. ಏಳನೇ ದಿನದ ಫಲಿತಾಂಶಗಳು: ಅಥ್ಲೆಟಿಕ್ಸ್‌: ಪುರುಷರ 100 ಮೀಟರ್ಸ್ ಓಟ: ವಿಘ್ನೇಶ್ (ಮಂಗಳೂರು ವಿವಿ)–1. ಕಾಲ: 10.50 ಸೆಕೆಂಡು (ಕೂಟ ದಾಖಲೆ. ಹಿಂದಿನದು 10.68, ಜಿ.ಕಠಿವರನ್‌), ತಮಿಳರಸು (ಭಾರತಿಯಾರ್‌)–2, ಪ್ರಣವ್ ಗೌರವ್ (ಪುಣೆ)–3; 400 ಮೀ ಹರ್ಡಲ್ಸ್‌: ರೋಹನ್ ಕಾಂಬ್ಳೆ (ಶಿವಾಜಿ)–1. ಕಾಲ: 52.22, ಪ್ರವೀಣ್ ಕುಮಾರ್ (ಮದುರೈ ಕಾಮರಾಜ್)–2, ಸುರೇಂದರ್‌ (ಭಾರತಿಯಾರ್)–3; 10,000 ಮೀ ಓಟ: ಆರಿಫ್‌ ಅಲಿ (ಜನನಾಯಕ್‌ ಚಂದ್ರಶೇಖರ್ ವಿವಿ)–1. ಕಾಲ: 30:26.40, ರೋಹಿತ್ ಯಾದವ್ (ನೆಹರು ಗ್ರಾಮಭಾರತಿ)–2, ಹರೀಶ್‌ (ಮಹರ್ಷಿ ದಯಾನಂದ್)–3; ಡಿಸ್ಕಸ್ ಥ್ರೋ: ಅಭಿನವ್‌ (ಲವ್ಲಿ ಪ್ರೊಫೆಷನಲ್‌)–1. ಅಂತರ: 54.46 ಮೀ (ಕೂಟ ದಾಖಲೆ; ಹಳೆಯದು: 50.47, ಪ್ರವೀಣ್ ಕುಮಾರ್ ನೆಹ್ರಾ), ವಸುಕೇಶ್ ಪೂನಿಯಾ (ಮಂಗಳೂರು)–2, ಪೃಥ್ವಿರಾಜ್ ನಲವಡೆ (ಪುಣೆ)–3; ಲಾಂಗ್‌ ಜಂಪ್‌: ಶ್ರೀರಾಮ್ (ಎಸ್‌ಆರ್‌ಎಂ)–1. ಅಂತರ: 7.31 ಮೀ, ಅನಿಲ್ ಕುಮಾರ್ ಸಾಹು (ಮಂಗಳೂರು)–2, ಶ್ರೀಕಾಂತ್‌ (ಮಹಾತ್ಮ ಗಾಂಧಿ). ಮಹಿಳೆಯರ 100 ಮೀ ಓಟ: ದ್ಯುತಿ ಚಾಂದ್‌ (ಕಳಿಂಗ)–1. ಕಾಲ: 11.68 ಸೆ, ಅವಂಕಿತಾ (ಪುಣೆ)–2, ಪ್ರೀತಿ (ಗುರು ಜಂಬೇಶ್ವರ)–3‍; 400 ಮೀ ಹರ್ಡಲ್ಸ್‌: ಆರತಿ (ಕ್ಯಾಲಿಕಟ್)–1. ಕಾಲ: 59.10, ಪ್ರಗ್ಯಾನ್ (ಲವ್ಲಿ)–2, ಗುಡಿಯಾ (ರಾಮ್‌ ಮನೋಹರ್‌ ಲೋಹಿಯಾ)–3; 10,000 ಮೀ ಓಟ: ಕೆ.ಎಂ.ಲಕ್ಷ್ಮಿ (ಮಂಗಳೂರು)–1. ಕಾಲ: 35 ನಿಮಿಷ, 49.23ಸೆ (ಕೂಟ ದಾಖಲೆ; ಹಳೆಯದು: 35:59.58, ಜ್ಯೊತಿ); ಭಾರತಿ (ಮಹರ್ಷಿ ದಯಾನಂದ್‌)–2, ಬಧೊ (ಮಹರ್ಷಿ ದಯಾನಂದ್)–3; 400 ಮೀ ಹರ್ಡಲ್ಸ್‌: ಆರ್‌.ಆರತಿ (ಕ್ಯಾಲಿಕಟ್‌)–1. ಕಾಲ: 59.10, ಪ್ರಗ್ಯಾನ್ ಪ್ರಶಾಂತ್ ಸಾಹು (ಲವ್ಲಿ)–2, ಗುಡಿಯಾ (ರಾಮ್‌ ಮನೋಹರ್ ಲೋಹಿಯಾ)–3. ಆರ್ಚರಿ: ಪುರುಷರ ಕಾಂಪೌಂಡ್‌: ತನಿಶ್‌ದೀಪ್‌ ಸಿಂಗ್ (ಡೆಲ್ಲಿ)–1, ಸಾಗರ್ ಚೋಪ್ರಾ (ಡೆಲ್ಲಿ)–2, ಹೃತಿಕ್‌ ಶರ್ಮಾ (ಗುರುನಾನಕ್‌ದೇವ್), ವಿಕಾಸ್‌ ರಾಜನ್ (ಪಂಜಾಬಿ)–3; ಮಹಿಳೆಯರ ಕಾಂಪೌಂಡ್‌: ಮಧುರಾ ಧನಗಾಂವ್ಕರ್ (ಅಮರಾವತಿ)–1, ಮಹೆಕ್ ಪಠಾಣ್ (ಪುಣೆ)–2, ಪ್ರಭ್‌ಜೋತ್‌ ಕೌರ್‌ (ಪಂಜಾಬಿ), ರಾಗಿಣಿ (ರಾಣಿ ದುರ್ಗಾವತಿ)–3. ಮಿಶ್ರ ಕಾಂಪೌಂಡ್‌: ಪಂಜಾಬಿ–1, ರಾಣಿ ದುರ್ಗಾವತಿ–2, ಚೌಧರಿ ಚರಣ್ ಸಿಂಗ್–3. ಜೂಡೊ: ಮಹಿಳಾ ವಿಭಾಗ: -78 ಕೆಜಿ ಮೈಬಮ್ ದೇವಿ (ಗುರುನಾನಕ್)–1, ಜ್ಯೋತಿ ಟೋಕಾಸ್‌ (ಡೆಲ್ಲಿ)–02, ಮನ್‌ಪ್ರೀತ್ ಕೌರ್ (ಪಂಜಾಬಿ), ಸಂಪದ (ಮುಂಬೈ)–3; +78 ಕೆಜಿ: ತೂಲಿಕಾ ಮಾನ್‌ (ದೀನ್‌ ದಯಾಳ್)–1, ಅಪೂರ್ವ ಪಾಟೀಲ್‌ (ಮುಂಬೈ)–2, ಅಮಿಶಾ ಕಾಳೆ (ಲವ್ಲಿ), ಮೇಘಾ ಸನ್ನಿ (ಕ್ಯಾಲಿಕಟ್‌)–3; ಪುರುಷರ ವಿಭಾಗ: -100 ಕೆಜಿ: ವಿಶಾಲ್‌ (ಇಂದಿರಾ ಗಾಂಧಿ)–1, ಆಶಿಷ್ ಮಲಿಕ್‌ (ಅಮರಾವತಿ)–2, ರಿತಿಕ್ ಕುಮಾರ್ (ಲವ್ಲಿ), ಅಭಿನವ್‌ ( ಬೀರ್‌ ಟಿಕೇಂದ್ರ ಸಿಂಗ್)–3; +100 ಕೆಜಿ: ವಿಧಾನ್ ಕುಮಾರ್ (ಡೆಲ್ಲಿ)–1, ಲಲಿತ್ (ಇಂದಿರಾಗಾಂಧಿ)–2, ಯಶ್‌ (ಚೌಧರಿ ಬನ್ಸಿಲಾಲ್), ಜಿತೇಶ್‌ (ಪಂಜಾಬ್‌)–3; ಪೆನ್ಸಿಂಗ್: ಮಹಿಳೆಯರ ಫಾಯಿಲ್‌: ರಿಯಾ ಬಕ್ಷಿ (ಗುರುನಾನಕ್)–1, ಕನಕಲಕ್ಷ್ಮಿ (ಕಣ್ಣೂರು)–2, ಅನಿತಾ ಚಾನು (ಮಣಿಪುರ್‌), ಕಾಜಲ್‌ (ಪಂಜಾಬ್‌)–3; ಎಪೀ: ಹಾಬಮ್ ಲಿಂಥೋಯಿ (ಮಣಿಪುರ್‌)–1, ಛವಿ ಕೊಹ್ಲಿ (ಪಂಜಾಬ್)–2, ಶೀತಲ್‌ (ಗುರುನಾನಕ್‌)–3; ಪುರುಷರ ಸಬ್ರೆ: ಅಭಯ್ ಕೃಷ್ಣ (ಮರಾಠವಾಡ)–1, ಪ್ರಿನ್ಸ್ (ಗುರುನಾನಕ್)–2, ಉದಯ್‌ವೀರ್ (ಜಮ್ಮು), ಧನಂಜಯ ಯಾದವ್‌ (ಶಿವಾಜಿ)–3; ಕರಾಟೆ: ಪುರುಷರ ಕಾಟಾ: ಹೃತಿಕ್ ಬಂಕೆ (ಜೀವಜಿ)–1, ಶ್ರೀಹರಿ (ಕೇರಳ)–2, ಅಬಾ (ಅರುಣೋದಯ), ರೋಷನ್ (ಲವ್ಲಿ)–3; ಮಹಿಳೆಯರ ಕಾಟಾ: ಮೆಸಮ್ (ಲವ್ಲಿ)–1, ದಿಯಾ ಅರಸ್‌ (ಮೈಸೂರು)–2, ಫರ್ಷಾನ (ಕ್ಯಾಲಿಟಕ್‌), ಪ್ರಿಯಾಂಕ (ಅಣ್ಣಾ)–3. ಹಾಕಿ: ಬೆಂಗಳೂರು ವಿವಿ ಫೈನಲ್‌ಗೆ ಬೆಂಗಳೂರು ನಗರ ವಿವಿ ತಂಡ ‍ಪುರುಷರ ಹಾಕಿಯಲ್ಲಿ ಫೈನಲ್ ಪ್ರವೇಶಿಸಿತು. ಕರ್ನಾಟಕ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಬೆಂಗಳೂರು ತಂಡ ಅಮೃತಸರದ ಗುರುನಾನಕ್ ದೇವ್ ವಿವಿಯನ್ನು ಎದುರಿಸಲಿದೆ. ಶೂಟೌಟ್‌ನಲ್ಲಿ ಕೊನೆಗೊಂಡ ರೋಚಕ ಸೆಮಿಫೈನಲ್‌ ಪಂದ್ಯಗಳಲ್ಲಿ ಬೆಂಗಳೂರು ನಗರ ವಿವಿ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯನ್ನು 5–3ರಲ್ಲಿ ಮತ್ತು ಗುರುನಾನಕ್ ವಿವಿ ಪಂಜಾಬ್ ವಿವಿಯನ್ನು 5–3ರಲ್ಲಿ ಮಣಿಸಿತು. ಎರಡನೇ ಸೆಮಿಫೈನಲ್‌ನಲ್ಲಿ ಹರೀಶ್ ಮುತಗಾರ 15ನೇ ನಿಮಿಷದಲ್ಲಿ ಗಳಿಸಿದ ಗೋಲಿನೊಂದಿಗೆ ಮುನ್ನಡೆ ಗಳಿಸಿದ ಬೆಂಗಳೂರು ನಗರ ವಿವಿಗೆ 31 ಮತ್ತು 54ನೇ ನಿಮಿಷಗಳಲ್ಲಿ ಮಯೂರ್ ಧನವಾಡೆ ‘ಡಬಲ್‌’ ಪೆಟ್ಟು ನೀಡಿದರು. 58ನೇ ನಿಮಿಷದಲ್ಲಿ ವಸಂತ ಕುಮಾರ್ ಗೋಕಾವಿ ಗಳಿಸಿದ ಗೋಲಿನೊಂದಿಗೆ ಬೆಂಗಳೂರು ತಂಡ ಸಮಬಲ ಸಾಧಿಸಿತು. ಶೂಟೌಟ್‌ನಲ್ಲಿ ಬೆಂಗಳೂರು ‍ಪಾರಮ್ಯ ಮೆರೆಯಿತು. ಕರಾಟೆಯಲ್ಲಿ ಮೈಸೂರು ವಿವಿಗೆ ಪದಕ ಮೈಸೂರು ವಿವಿಯ ದಿಯಾ ಅರಸ್ ಅವರು ಕರಾಟೆಯ ಕಾಟಾ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಲವ್ಲಿ ಪ್ರೊಫೆಷನಲ್ ವಿವಿಯ ಮೆಸಾಮ್ (24.32) ವಿರುದ್ಧ ಫೈನಲ್‌ನಲ್ಲಿ ದಿಯಾ (23.52) ಸೋತರು. ಕ್ಯಾಲಿಕಟ್‌ ವಿವಿಯ ಫರ್ಷಾನಾ ಮತ್ತು ಅಣ್ಣಾ ವಿವಿಯ ಪ್ರಿಯಾಂಕ ಕಂಚು ಗಳಿಸಿದರು. ಕಬಡ್ಡಿ: ಮಂಗಳೂರು ವಿವಿಗೆ ಗೆಲುವು ಮಹಿಳೆಯರ ಕಬಡ್ಡಿಯಲ್ಲಿ ಕಳೆದ ಬಾರಿ ಕಂಚಿನ ಪದಕ ಗೆದ್ದಿದ್ದ ಮಂಗಳೂರು ವಿವಿ 34–30ರಲ್ಲಿ ಗುರುನಾನಕ್‌ ವಿವಿಯನ್ನು ಮಣಿಸಿ ಲೀಗ್‌ನಲ್ಲಿ ಮೊದಲ ಜಯ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.