5000 ಮೀ ಓಟದಲ್ಲಿ ಅವಿನಾಶ್‌ ಸಬ್ಳೆ ದಾಖಲೆ ನವದೆಹಲಿ: ಭಾರತದ ಅವಿನಾಶ್ ಸಬ್ಳೆ ಅವರು 5000 ಮೀಟರ್ಸ್ ಓಟದಲ್ಲಿ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಯುವಾನ ಕ್ಯಾಪಿಸ್ಟ್ರಾನೊದಲ್ಲಿ ನಡೆಯುತ್ತಿರುವ ಸೌಂಡ್ ರನ್ನಿಂಗ್ ಟ್ರ್ಯಾಕ್ ಮೀಟ್‌ನಲ್ಲಿ 13 ನಿಮಿಷ 25.65 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಸಬ್ಳೆ 30 ವರ್ಷಗಳ ದಾಖಲೆಯನ್ನು ಹಿಂದಿಕ್ಕಿದರು. ಟೋಕಿಯೊ ಒಲಿಂಪಿಕ್ಸ್‌ನ 3000 ಮೀಟರ್ಸ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದ ಅವರು ಇಲ್ಲಿ 5000 ಮೀಟರ್ಸ್ ಓಟದಲ್ಲಿ 12ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ನಾರ್ವೆಯ ಜೇಕಬ್ ಇಂಗ್‌ಬ್ರಿಟ್ಸೆನ್ 13 ನಿಮಿಷ 02.03 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗಳಿಸಿದರು. ಟೋಕಿಯೊ ಒಲಿಂಪಿಕ್ಸ್‌ನ 1500 ಮೀಟರ್ಸ್ ಓಟದಲ್ಲಿ ಅವರು ಚಿನ್ನ ಗೆದ್ದಿದ್ದರು. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಾಂಡ್ವ ಗ್ರಾಮದವರಾದ 27 ವರ್ಷದ ಅವಿನಾಶ್ ಸೇನೆಯಲ್ಲಿದ್ದಾರೆ. ಕೃಷಿಕ ಕುಟುಂಬದಲ್ಲಿ ಜನಿಸಿ ಬೆಳೆದ ಅವರು 30 ವರ್ಷಗಳ ಹಿಂದೆ ಬಹದ್ದೂರ್ ಪ್ರಸಾದ್ ಮಾಡಿದ ದಾಖಲೆಯನ್ನು ಮುರಿದರು. 1992ರ ಬರ್ಮಿಹ್ಯಾಂನಲ್ಲಿ ನಡೆದ ಕ್ರೀಡಾಕೂಟದಲ್ಲಿ ಬಹದ್ದೂರ್ 13 ನಿಮಿಷ 29.70 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಭಾರತ ಅಥ್ಲೆಟಿಕ್ಸ್‌ನಲ್ಲಿ ಎರಡನೇ ಅತಿ ಹಳೆಯ ದಾಖಲೆ ಮುರಿದ ಸಾಧನೆಯೂ ಅವಿನಾಶ್‌ ಅವರದಾಯಿತು. ಶಿವನಾಥ್‌ ಸಿಂಗ್ ಅವರು 44 ವರ್ಷಗಳ ಹಿಂದೆ ಮ್ಯಾರಥಾನ್‌ನಲ್ಲಿ (2:12:00)ಮಾಡಿದ್ದ ದಾಖಲೆ ದೇಶದ ಅತಿ ಹಳೆಯ ದಾಖಲೆಯಾಗಿದೆ. ಎರಡು ವರ್ಷಗಳ ಹಿಂದೆ ನಡೆದ ಡೆಲ್ಲಿ ಹಾಫ್‌ ಮ್ಯಾರಥಾನ್‌ನಲ್ಲಿ (21 ಕಿಮೀ) 1 ತಾಸು 30 ಸೆಕೆಂಡುಗಳ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ಬರೆದಿರುವ ಅವಿನಾಶ್ 3000 ಮೀ ಸ್ಟೀಪಲ್‌ಚೇಸ್‌ನಲ್ಲಿ ತಮ್ಮದೇ ದಾಖಲೆಯನ್ನು ಏಳು ಬಾರಿ ಮುರಿದಿದ್ದಾರೆ. ಕಳೆದ ಮಾರ್ಚ್‌ನಲ್ಲಿ ತಿರುವನಂತಪುರದಲ್ಲಿ ನಡೆದ ಇಂಡಿಯನ್ ಗ್ರ್ಯಾನ್‌ಪ್ರಿ–2ರಲ್ಲಿ 8:16.21 ಸಾಧನೆಯೊಂದಿಗೆ ಕೊನೆಯದಾಗಿ ದಾಖಲೆ ಮಾಡಿದ್ದಾರೆ. ಏಷ್ಯನ್ ಗೇಮ್ಸ್‌ನ 3000 ಮೀ ಸ್ಟೀಪಲ್ ಚೇಸ್ ಮತ್ತು 5000 ಮೀ ಓಟದಲ್ಲಿ ಅವಿನಾಶ್ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಅವರು ಪದಕ ಗೆಲ್ಲುವ ಭರವಸೆ ಇದೆ. ರಾಧಾಕೃಷ್ಣನ್ ನಾಯರ್ ಭಾರತದ ಅಥ್ಲೆಟಿಕ್ಸ್ ಕೋಚ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.