ಡೆಫ್‌ಲಿಂಪಿಕ್ಸ್: ಫೈನಲ್‌ಗೆ ದೀಕ್ಷಾ ದಾಗರ್‌ ಕಾಕ್ಸಿಯಸ್‌ ಡು ಸುಲ್‌, ಬ್ರೆಜಿಲ್‌: ಭಾರತದ ಗಾಲ್ಫ್ ಆಟಗಾರ್ತಿ ದೀಕ್ಷಾ ದಾಗರ್ ಅವರು ಇಲ್ಲಿ ನಡೆಯುತ್ತಿರುವ ಡೆಫ್‌ಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. 21 ವರ್ಷದ ದೀಕ್ಷಾ ಕೂಟದ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 2017ರಲ್ಲಿ ಟರ್ಕಿಯ ಸ್ಯಾಮ್ಸನ್‌ನಲ್ಲಿ ನಡೆದ ಕಳೆದ ಬಾರಿಯ ಡೆಫ್‌ಲಿಂಪಿಕ್ಸ್‌ನಲ್ಲಿ ಅವರು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಜಿದ್ದಾಜಿದ್ದಿನ ಸೆಮಿಫೈನಲ್‌ನಲ್ಲಿ ದೀಕ್ಷಾ ಆರಂಭದಿಂದಲೂ ಪಾರಮ್ಯ ಮೆರೆದರು. 2017ರ ಕಂಚಿನ ಪದಕ ವಿಜೇತೆ, ನಾರ್ವೆಯ ಆ್ಯಂಡ್ರಿಯಾ ಹೊವ್‌ಸ್ಟೇನ್‌ ಹೆಲ್ಲೆಗ್ರೆಜ್‌ ಅವರನ್ನು ಹಿಂದಿಕ್ಕಿದರು. ಫೈನಲ್‌ನಲ್ಲಿ ದೀಕ್ಷಾ ಅಮೆರಿಕದ ಆ್ಯಶ್ಲಿನ್‌ ಗ್ರೇಸ್‌ ಜಾನ್ಸನ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ. ನಾಲ್ಕರ ಘಟ್ಟದಲ್ಲಿ ಆಶ್ಲಿನ್‌ ಫ್ರಾನ್ಸ್‌ನ ಮಾರ್ಗಕ್ಸ್ ಬ್ರೆಜೊ ಅವರನ್ನು ಸೋಲಿಸಿದರು. ಈ ಬಾರಿಯ ಕೂಟದಲ್ಲಿ ಭಾರತ ಇದುವರೆಗೆ ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದು, ಪದಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.