ಬ್ಯಾಡ್ಮಿಂಟನ್‌: ಪ್ರಧಾನ ಸುತ್ತಿಗೆ ಮಾಳವಿಕಾ, ಅಶ್ಮಿತಾ ಕ್ವಾಲಾಲಂಪುರ: ಭಾರತದ ಮಾಳವಿಕಾ ಬನ್ಸೊದ್‌ ಮತ್ತು ಅಶ್ಮಿತಾ ಚಲಿಹಾ ಅವರು ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಧಾನ ಸುತ್ತು ಪ್ರವೇಶಿಸಿದರು. ಮಂಗಳವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 42ನೇ ಸ್ಥಾನದಲ್ಲಿರುವ ಮಾಳವಿಕಾ 21–12, 21–19 ರಲ್ಲಿ ಚೀನಾ ತೈಪೆಯ ಲಿನ್‌ ಸಿಯಾಂಗ್‌ ಅವರನ್ನು ಮಣಿಸಿದರು. ವಿಶ್ವದ 53ನೇ ರ್‍ಯಾಂಕ್‌ನ ಆಟಗಾರ್ತಿ ಅಶ್ಮಿತಾ 10-21, 21-19, 21-17 ರಲ್ಲಿ ಕೆನಡಾದ ವೆನ್‌ ಯು ಜಾಂಗ್ ವಿರುದ್ದ ಗೆದ್ದರು. ಬುಧವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಮಾಳವಿಕಾ ಅವರು ಎರಡನೇ ಶ್ರೇಯಾಂಕದ ಆಟಗಾರ್ತಿ ವಾಂಗ್‌ ಜಿ ಯಿ ವಿರುದ್ಧ ಆಡಲಿದ್ದರೆ, ಅಶ್ಮಿತಾ ಅವರು ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಹಾನ್‌ ಯುಯೆ ಅವರ ಸವಾಲು ಎದುರಿಸುವರು. ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಕರ್ನಾಟಕದ ಮಿಥುನ್‌ ಮಂಜುನಾಥ್‌ ಪ್ರಧಾನ ಸುತ್ತು ಪ್ರವೇಶಿಸಲು ವಿಫಲರಾದರು. ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಅವರು 13-21, 19-21 ರಲ್ಲಿ ತೈಪೆಯ ಚಿಯಾ ಹಾವೊ ಲೀ ಎದುರು ಪರಾಭವಗೊಂಡರು. ಶಂಕರ್‌ ಮುತ್ತುಸ್ವಾಮಿ 10-21, 14-21 ರಲ್ಲಿ ತೈಪೆಯ ಚಿ ಯು ಜೆನ್‌ ಕೈಯಲ್ಲಿ ಸೋತರು. ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್‌, ಕಿದಂಬಿ ಶ್ರೀಕಾಂತ್‌ ಮತ್ತು ಲಕ್ಷ್ಯ ಸೇನ್‌ ಅವರು ಬುಧವಾರ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.