ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿ: ಪ್ರೀಕ್ವಾರ್ಟರ್‌ಗೆ ಸಿಂಧು ಕ್ವಾಲಾಲಂಪುರ: ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವಿನ ಆರಂಭ ಮಾಡಿದ್ದಾರೆ. ಇಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಬುಧವಾರ 21-13, 17-21, 21-18ರಿಂದ ಡೆನ್ಮಾರ್ಕ್‌ನ ಲಿನ್‌ ಕ್ರಿಸ್ಟೊಫರ್ಸನ್ ಅವರನ್ನು ಮಣಿಸಿ ಪ್ರೀಕ್ವಾರ್ಟರ್‌ಫೈನಲ್ ತಲುಪಿದರು. ಎರಡು ತಾಸು ಎರಡು ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿ ಪೈಪೋಟಿಯಲ್ಲಿ ಸಿಂಧು ಗೆಲುವಿನ ನಗೆ ಬೀರಿದರು. ಇಲ್ಲಿ ಆರನೇ ಶ್ರೇಯಾಂಕ ಪಡೆದಿರುವ ಭಾರತದ ಆಟಗಾರ್ತಿ, ಮೊದಲ ಗೇಮ್‌ಅನ್ನು ಸುಲಭವಾಗಿ ಕೈವಶ ಮಾಡಿಕೊಂಡರು. ಎರಡನೇ ಗೇಮ್‌ನಲ್ಲಿ ಲಿನ್ ತಿರುಗೇಟು ನೀಡಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಅನುಭವವನ್ನು ಪಣಕ್ಕಿಟ್ಟು ಆಡಿದ ಸಿಂಧು ಅವರಿಗೆ ಜಯ ಒಲಿಯಿತು. ವಿಶ್ವ ಕ್ರಮಾಂಕದಲ್ಲಿ 33ನೇ ಸ್ಥಾನದಲ್ಲಿರುವ ಡೆನ್ಮಾರ್ಕ್ ಆಟಗಾರ್ತಿಯನ್ನು ಸಿಂಧು, ಈ ಹಿಂದೆ ನಾಲ್ಕು ಬಾರಿ ಸೋಲಿಸಿದ್ದರು. ಸಿಂಧು ಅವರಿಗೆ ಮುಂದಿನ ಪಂದ್ಯದಲ್ಲಿ ಜಪಾನ್‌ನ ಅಯಾ ಒಹೊರಿ ಸವಾಲು ಎದುರಾಗಿದೆ. ಅರ್ಹತಾ ಸುತ್ತಿನಿಂದ ಗೆದ್ದು ಬಂದಿದ್ದ ಅಶ್ಮಿತಾ ಚಲಿಹಾ ಹಾಗೂ ಆಕರ್ಷಿ ಕಶ್ಯಪ್‌ ಅವರ ಅಭಿಯಾನ ಮೊದಲ ಸುತ್ತಿನಲ್ಲೇ ಅಂತ್ಯವಾಯಿತು. ಅಶ್ಮಿತಾ 17-21, 7-21ರಿಂದ ಚೀನಾದ ಯು ಹಾನ್ ವಿರುದ್ಧ ಮತ್ತು ಆಕರ್ಷಿ 17-21, 12-21ರಿಂದ ಜಪಾನ್‌ನ ಅಕಾನೆ ಯಮಗುಚಿ ಎದುರು ನಿರಾಸೆ ಕಂಡರು. ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಶ್ರೀಕಾಂತ್‌ 21-12, 21-16ರಿಂದ ಫ್ರಾನ್ಸ್‌ನ ತೊಮಾ ಜೂನಿಯರ್ ಪೊಪೊವ್ ಎದುರು ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು. ಮುಂದಿನ ಪಂದ್ಯದಲ್ಲಿ ಶ್ರೀಕಾಂತ್ ಅವರು ಥಾಯ್ಲೆಂಡ್‌ನ ಕುನ್ಲಾವುತ್‌ ವಿತಿದ್ಸನ್‌ ಎದುರು ಆಡುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.