ಮಲೇಷ್ಯಾ ಬ್ಯಾಡ್ಮಿಂಟನ್‌ ಟೂರ್ನಿ: ಎಂಟರಘಟ್ಟಕ್ಕೆ ಸಿಂಧು, ಶ್ರೀಕಾಂತ್‌, ಪ್ರಣಯ್‌ ಕ್ವಾಲಾಲಂಪುರ: ಗೆಲುವಿನ ಓಟ ಮುಂದುವರಿಸಿದ ಭಾರತದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗುರುವಾರ ಸಿಂಧು 21-16, 21-11ರಿಂದ ಜಪಾನ್‌ನ ಅಯಾ ಒಹೊರಿ ಸವಾಲು ಮೀರಿದರು. ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಸಿಂಧು ಕೇವಲ 40 ನಿಮಿಷಗಳಲ್ಲಿ ಎದುರಾಳಿಯನ್ನು ಮಣಿಸಿದರು. ನೇರ ಗೇಮ್‌ಗಳ ಜಯ ಅವರಿಗೆ ಒಲಿಯಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಸಿಂಧು ಅವರಿಗೆ ಎಂಟರಘಟ್ಟದಲ್ಲಿ ಚೀನಾದ ಯಿ ಮಾನ್‌ ಜಾಂಗ್ ಸವಾಲು ಎದುರಾಗಿದೆ. ಪುರುಷರ ಸಿಂಗಲ್ಸ್ ವಿಭಾಗದ 16ರ ಘಟ್ಟದ ಹಣಾಹಣಿಯಲ್ಲಿ ಪ್ರಣಯ್‌ 13-21, 21-16, 21-11ರಿಂದ ಚೀನಾದ ಷಿ ಫೆಂಗ್ ಲೀ ಅವರಿಗೆ ಸೋಲುಣಿಸಿದರು. ಜಿದ್ದಾಜಿದ್ದಿ ಪೈಪೋಟಿ ನಡೆದ ಪಂದ್ಯದ ಮೊದಲ ಗೇಮ್ ಕೈಚೆಲ್ಲಿದ ಭಾರತದ ಆಟಗಾರ, ಬಳಿಕ ಎರಡು ಗೇಮ್‌ಗಳಲ್ಲಿ ಪಾರಮ್ಯ ಮೆರೆದರು. ಪ್ರಣಯ್ ಅವರು ಮುಂದಿನ ಪಂದ್ಯದಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ಎದುರು ಆಡುವರು. ಪ್ರೀಕ್ವಾರ್ಟರ್‌ನ ಮತ್ತೊಂದು ಸೆಣಸಾಟದಲ್ಲಿ ಶ್ರೀಕಾಂತ್‌ 21-19, 21-19ರಿಂದ ಇಂಡಿಯಾ ಓಪನ್ ಚಾಂಪಿಯನ್‌, ಥಾಯ್ಲೆಂಡ್‌ನ ವಿತಿದ್ಸನ್ ಕುನ್ಲಾವತ್‌ ಅವರನ್ನು ಮಣಿಸಿದರು. 2021ರ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಶ್ರೀಕಾಂತ್‌ ತಮ್ಮ ಮುಂದಿನ ಪಂದ್ಯವನ್ನು ಇಂಡೊನೇಷ್ಯಾದ ಕ್ರಿಸ್ಟಿಯನ್ ಆದಿನಾಥ ವಿರುದ್ಧ ಆಡುವರು. ಲಕ್ಷ್ಯ ಸವಾಲು ಅಂತ್ಯ: ಭಾರತದ ಇನ್ನೊಬ್ಬ ಪ್ರಮುಖ ಆಟಗಾರ ಲಕ್ಷ್ಯ ಸೇನ್ ಅವರ ಅಭಿಯಾನ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಕೊನೆಗೊಂಡಿತು ಹಾಂಗ್‌ಕಾಂಗ್‌ನ ಆ್ಯಂಗಸ್‌ ಎನ್‌ಜಿ ಕಾ ಲಾಂಗ್‌ 21–14, 21–19ರಿಂದ ಲಕ್ಷ್ಯ ಅವರಿಗೆ ಸೋಲುಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.