ಡಬ್ಲ್ಯುಎಫ್‌ಐ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ಗುವಾಹಟಿ: ಭಾರತ ಕುಸ್ತಿ ಫೆಡರೇಷನ್ ಚುನಾವಣೆಯ ದಿನಾಂಕವನ್ನು ಈಗಾಗಲೇ ಹಲವು ಬಾರಿ ಮುಂದೂಡಲಾಗಿತ್ತು. ಇದೀಗ ಮತ್ತೊಮ್ಮೆ ಮುಂದೂಡಲಾಗುತ್ತಿದೆ. ಜುಲೈ 11ರಂದು ನಿಗದಿಯಾಗಿರುವ ಚುನಾವಣೆಗೆ ಗುವಾಹಟಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಚುನಾವಣೆಗಾಗಿ ಸಿದ್ಧಪಡಿಸಲಾಗಿರುವ ಮತದಾರರ ಪಟ್ಟಿಯಲ್ಲಿ ತಮ್ಮ ಸಂಸ್ಥೆಯ ಹೆಸರು ಇಲ್ಲವೆಂದು ಆರೋಪಿಸಿರುವ ಅಸ್ಸಾಂ ಕುಸ್ತಿ ಸಂಘವು ಗುವಾಹಟಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಚುನಾವಣೆಗೆ ತಡೆಯಾಜ್ಞೆ ನೀಡಿದೆ. ಡಬ್ಲ್ಯುಎಫ್‌ಐ ಚುನಾವಣೆಯನ್ನು ಅಡ್‌ಹಾಕ್ ಸಮಿತಿಯು ಜುಲೈ 11ಕ್ಕೆ ನಿಗದಿ ಮಾಡಿತ್ತು. ಅದಕ್ಕಾಗಿ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲು ಜೂನ್ 25 ಕೊನೆಯ ದಿನಾಂಕವಾಗಿತ್ತು. ’ತಮ್ಮ ಸಂಸ್ಥೆಗೆ ಮಾನ್ಯತೆ ನೀಡಬೇಕು ಎಂದು 2014ರ ನವೆಂಬರ್ 25ರಂದು ಗೊಂಡಾದಲ್ಲಿ ನಡೆದಿದ್ದ ಡಬ್ಲ್ಯುಎಫ್‌ಐ ಸರ್ವಸದಸ್ಯರ ಮಹಾಸಭೆಯಲ್ಲಿ ಶಿಫಾರಸು ಮಾಡಲಾಗಿತ್ತು. ಮಾನ್ಯತೆ ಪಡೆಯುವ ಎಲ್ಲ ಅರ್ಹತೆಗಳಿದ್ದರೂ ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿಲ್ಲ. ರಾಜ್ಯದಲ್ಲಿ ಕುಸ್ತಿ ಕ್ರೀಡೆಯ ಬೆಳವಣಿಗೆಗೆ ನಿರಂತರವಾಗಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಡಬ್ಲ್ಯುಎಫ್‌ಐ ಮಾರ್ಗದರ್ಶನದಲ್ಲಿ ರಾಜ್ಯ ಟೂರ್ನಿಗಳನ್ನು ಆಯೋಜಸಲಾಗುತ್ತಿದೆ‘ ಎಂದು ಅಸ್ಸಾಂ ಕುಸ್ತಿ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ. ಈ ಪ್ರಕರಣದ ವಿಚಾರಣೆಗೆ ಮುಂದಿನ ದಿನಾಂಕವನ್ನು ಪ್ರಕಟಿಸುವವರೆಗೂ ಚುನಾವಣೆಯನ್ನು ನಡೆಸುವಂತಿಲ್ಲ ಎಂದು ಡಬ್ಲ್ಯುಎಫ್‌ಐ ಹಾಗೂ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಹೈಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜುಲೈ 17ರಂದು ನಡೆಸುವುದಾಗಿ ಪ್ರಕಟಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.