ಫೈವ್ ಸೈಡ್‌ ಹಾಕಿ: ಭಾರತ ತಂಡಗಳ ಕೌಶಲ, ಫಿಟ್‌ನೆಸ್‌ಗೆ ಸವಾಲು ಲಾಸನ್‌: ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ತಂಡವು ಚೊಚ್ಚಲ ಎಫ್‌ಐಎಚ್‌ ಫೈವ್ ಸೈಡ್ ಹಾಕಿ ಟೂರ್ನಿಯಲ್ಲಿ ಶನಿವಾರ ಕಣಕ್ಕಿಳಿಯಲಿದೆ. ಸಾಂಪ್ರದಾಯಿಕ ಹಾಕಿಗಿಂತ ಸ್ವಲ್ಪ ಭಿನ್ನವಾಗಿರುವ ಈ ಮಾದರಿಯಲ್ಲಿ ತಂಡದ ಆಟಗಾರರ ಫಿಟ್‌ನೆಸ್‌ ಮತ್ತು ಕೌಶಲಗಳ ಪರೀಕ್ಷೆ ನಡೆಯಲಿದೆ. ಟಿ20 ಕ್ರಿಕೆಟ್‌ ಮತ್ತು ರಗ್ಬಿ ಸೆವೆನ್ ಮಾದರಿಯಲ್ಲಿ ಈ ಆಟವನ್ನು ಜನಪ್ರಿಯವಾಗಿಸುವ ಇರಾದೆಯೊಂದಿಗೆ ಅಂತರಾಷ್ಟ್ರೀಯ ಹಾಕಿ ಫೆಡರೇಷನ್‌ ಎರಡು ದಿನಗಳ ಕೂಟವನ್ನು ಆಯೋಜಿಸಿದೆ. ಗುರಿಂದರ್ ಸಿಂಗ್‌ ನಾಯಕತ್ವದ ಭಾರತ ತಂಡವು ಮೊದಲ ದಿನವಾದ ಶನಿವಾರ ಸ್ವಿಟ್ಜರ್ಲೆಂಡ್‌ ಮತ್ತು ಪಾಕಿಸ್ತಾನ ತಂಡಗಳ ಸವಾಲು ಎದುರಿಸಲಿದೆ. ಭಾನುವಾರ ಮಲೇಷ್ಯಾ ಮತ್ತು ಪೋಲೆಂಡ್ ತಂಡಗಳಿಗೆ ಮುಖಾಮುಖಿಯಾಗಲಿದೆ. ‘ಟೂರ್ನಿಯಲ್ಲಿ ಆಡಲು ಕಾತರರಾಗಿದ್ದೇವೆ. ಇಲ್ಲಿ ವಾತಾವರಣ ಅದ್ಭುತವಾಗಿದೆ. ಉತ್ತಮ ತರಬೇತಿಯೂ ಸಿಕ್ಕಿದೆ‘ ಎಂದು ಗುರಿಂದರ್ ಹೇಳಿದ್ದಾರೆ. ರಜನಿ ಎತಿಮರ್ಪು ಸಾರಥ್ಯದ ಭಾರತ ಮಹಿಳಾ ತಂಡವು ಟೂರ್ನಿಯಲ್ಲಿ ಆಡಲಿದ್ದು, ಶನಿವಾರ ಉರುಗ್ವೆ ಮತ್ತು ಪೋಲೆಂಡ್‌ ತಂಡಗಳನ್ನು ಎದುರಿಸ‌ಲಿದೆ. ಭಾನುವಾರ ಸ್ವಿಟ್ಜರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸವಾಲು ಎದುರಾಗಲಿದೆ. ಈ ಮಾದರಿಯಲ್ಲಿ ಪ್ರತಿ ತಂಡದಲ್ಲಿ ಒಬ್ಬ ಗೋಲ್‌ಕೀಪರ್ ಮತ್ತು ನಾಲ್ವರು ಫೀಲ್ಡ್ ಆಟಗಾರರು ಇರಲಿದ್ದಾರೆ. ಭಾರತದ ಇಂದಿನ ಪಂದ್ಯಗಳು (ಪುರುಷರ ವಿಭಾಗ) ಸ್ವಿಟ್ಜರ್ಲೆಂಡ್‌ ವಿರುದ್ಧ ಆರಂಭ: ಸಂಜೆ 6.30 ಪಾಕಿಸ್ತಾನ ವಿರುದ್ಧ ಆರಂಭ: ರಾತ್ರಿ 8.30 ಮಹಿಳಾ ವಿಭಾಗ ಉರುಗ್ವೆ ವಿರುದ್ಧ ಆರಂಭ: ಸಂಜೆ 6 ಗಂಟೆ ಪೋಲೆಂಡ್‌ ವಿರುದ್ಧ ಆರಂಭ: ರಾತ್ರಿ 8 ಗಂಟೆ ಸಮಯ: ಭಾರತೀಯ ಕಾಲಮಾನ ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.