ಬಿಟಿಸಿಯಲ್ಲಿ ಬೇಸಿಗೆ ರೇಸ್‌ಗಳು ನಾಳೆಯಿಂದ ಬೆಂಗಳೂರು: ಇಲ್ಲಿನ ಬೆಂಗಳೂರು ಟರ್ಫ್‌ ಕ್ಲಬ್‌ ಆಶ್ರಯದಲ್ಲಿ ಇದೇ 20ರಿಂದ ಆಗಸ್ಟ್ 4ರವರೆಗೆ ಬೇಸಿಗೆ ರೇಸ್‌ಗಳು ಆಯೋಜನೆಗೊಳ್ಳಲಿವೆ. ಪ್ರತಿಷ್ಠಿತ ಸಮರ್ ಡರ್ಬಿ ರೇಸ್‌ ಜುಲೈ 16ರಂದು ನಡೆಯಲಿದೆ. ಈ ಋತುವಿನಲ್ಲಿ ಒಟ್ಟು 24 ರೇಸ್‌ ದಿನಗಳನ್ನು ಏರ್ಪಡಿಸಲಾಗಿದೆ. 2022ನೇ ಸಾಲಿನ ಬೆಂಗಳೂರು ಬೇಸಿಗೆ ರೇಸ್‌ಗಳಲ್ಲಿ ಒಟ್ಟು ₹ 14.41 ಕೋಟಿಗಳನ್ನು ವಿನಿಯೋಗಿಸಲಾಗಿತ್ತು. ಪ್ರಸಕ್ತ ಋತುವಿನಲ್ಲಿ ಬಹುಮಾನದ ಮೊತ್ತವು ₹ 18.4 ಕೋಟಿಗೆ ಏರಿಕೆಯಾಗಲಿದೆ ಎಂದು ಬೆಂಗಳೂರು ಟರ್ಫ್‌ ಕ್ಲಬ್‌ ಲಿಮಿಟೆಡ್‌ ಚೇರ್ಮನ್ ಶಿವಕುಮಾರ್‌ ಖೇಣಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ’ಬೆಂಗಳೂರು ಬೇಸಿಗೆ ಡರ್ಬಿ ಗ್ರೇಡ್‌-1 ರೇಸ್‌ ಆಗಿದೆ. ಈ ರೇಸ್‌ಗೆ ಒಟ್ಟು ಬಹುಮಾನದ ಮೊತ್ತವು ಅಂದಾಜು ₹ 2 ಕೋಟಿ ನಿಗದಿ ಮಾಡಲಾಗಿದೆ. ಫಿಲ್ಲೀಸ್‌ ಚಾಂಪಿಯನ್‌ಷಿಪ್‌ ಸ್ಟೇಕ್ಸ್‌ ಮತ್ತು ಕೋಲ್ಟ್ಸ್‌ ಚಾಂಪಿಯನ್‌ಷಿಪ್‌ ಸ್ಟೇಕ್ಸ್‌ಗಳ ರೇಸ್‌ಗಳ ತಲಾ ಒಟ್ಟು ಬಹುಮಾನ ಮೊತ್ತವು ₹ 50 ಲಕ್ಷಗಳಾಗಿವೆ‘ ಎಂದು ತಿಳಿಸಿದರು. ಸುಮಾರು 50 ಟ್ರೈನರ್‌ಗಳು ಹಾಗೂ 100 ಜಾಕಿಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು 742 ಕುದುರೆಗಳು ಸ್ಪರ್ಧಿಸುವ ನಿರೀಕ್ಷೆ ಇದೆ. ಇದರಲ್ಲಿ 165 ಅಶ್ವಗಳೂ ಮುಂಬೈ, ಹೈದರಾಬಾದ್‌, ಕೋಲ್ಕತ್ತ ಮತ್ತು ಚೆನ್ನೈ ನಿಂದ ಬಂದಿವೆ. ಹೋದ ಸಲ ನಡೆದಿದ್ದ ರೇಸ್‌ನಲ್ಲಿ 562 ಕುದುರೆಗಳು ಸ್ಪರ್ಧಿಸಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.