ಖೇಲೊ ಇಂಡಿಯಾ: ಸಂಭವ್‌, ವಿಹಿತಾಗೆ ಬೆಳ್ಳಿ ಬೆಂಗಳೂರು: ಕರ್ನಾಟಕದ ಈಜುಪಟುಗಳಾದ ಸಂಭವ್ ಆರ್‌. ಮತ್ತು ವಿಹಿತಾ ನಯನಾ ಅವರು ಹರಿಯಾಣದ ಪಂಚಕುಲಾದಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಕ್ರೀಡಾಕೂಟದಲ್ಲಿ ಭಾನುವಾರ ಬೆಳ್ಳಿ ಪದಕ ಜಯಿಸಿದರು. ಬಾಲಕರ 50 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಸಂಭವ್‌ 24.04 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಗಳಿಸಿದರು. ವಿಹಿತಾ, ಬಾಲಕಿಯರ 50 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ 34.67 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 1500 ಮೀ. ಫ್ರೀಸ್ಟೈಲ್‌ನಲ್ಲಿ ಶಿರಿನ್‌ (18 ನಿ. 4.49 ಸೆ.) ಬೆಳ್ಳಿ ಮತ್ತು ಅಸ್ಮಿತಾ (18 ನಿ. 29.23ಸೆ) ಕಂಚಿನ ಪದಕಗಳಿಗೆ ಮುತ್ತಿಟ್ಟರು. ಬಾಲಕರ 200 ಮೀ. ಬಟರ್‌ಫ್ಲೈನಲ್ಲಿ ಉತ್ಕರ್ಷ್‌ ಪಾಟೀಲ್‌ (2 ನಿ. 5.49 ಸೆ.), ಬಾಲಕರ ವಿಭಾಗದ ಇದೇ ಸ್ಪರ್ಧೆಯಲ್ಲಿ ಹಷಿಕಾ ರಾಮಚಂದ್ರ (2 ನಿ. 22.87 ಸೆ.) ಕಂಚು ಜಯಿಸಿದರು. ಬಾಲಕಿಯರ 50 ಮೀಟರ್ಸ್ ವಿಭಾಗದಲ್ಲಿ ರಿಧಿಮಾ ವೀರೇಂದ್ರಕುಮಾರ್ (27.92 ಸೆ.) ಮತ್ತು ಬಾಲಕರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿದಿತ್ ಶಂಕರ್‌ (30.27 ಸೆ.) ಕೂಡ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು. ರಿದ್ಧಿ, ಕಾಪಿಶ್‌ಗೆ ಆರ್ಚರಿ ಚಿನ್ನ: ಹರಿಯಾಣದ ರಿದ್ಧಿ ಮತ್ತು ರಾಜಸ್ಥಾನದ ಕಾಪಿಶ್ ಸಿಂಗ್‌ ಅವರು ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ರಿಕರ್ವ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಈ ಪದಕಗಳೊಂದಿಗೆ ಮಹಾರಾಷ್ಟ್ರ ತಂಡವು ಪದಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು. ಸದ್ಯ ಆ ತಂಡದ ಬಳಿ 38 ಚಿನ್ನ, 35 ಬೆಳ್ಳಿ ಮತ್ತು 29 ಕಂಚಿನ ಪದಕಗಳಿವೆ. ಎರಡನೇ ಸ್ಥಾನದಲ್ಲಿರುವ ಹರಿಯಾಣ ತಂಡವು 37 ಚಿನ್ನ, 34 ಬೆಳ್ಳಿ ಮತ್ತು 39 ಕಂಚಿನ ಪದಕಗಳನ್ನು ಜಯಿಸಿದೆ. ಆರ್ಚರಿ ಫೈನಲ್‌ನಲ್ಲಿ ರಿದ್ಧಿ 6–4ರಿಂದ ತಮ್ಮದೇ ರಾಜ್ಯದ ತಮನ್ನಾ ಅವರನ್ನು ಸೋಲಿಸಿದರು. ಬಾಲಕರ ಫೈನಲ್‌ನಲ್ಲಿ ಕಾಪಿಶ್‌ 7–3ರಿಂದ ಅಜಯ್ ನಗರವಾಲ್ ಅವರನ್ನು ಮಣಿಸಿದರು. ತಮಿಳುನಾಡು ಬಾಲಕಿಯರ ತಂಡವು ಫುಟ್‌ಬಾಲ್‌ನಲ್ಲಿ ಚಿನ್ನದ ಪದಕ ಜಯಿಸಿತು. ಫೈನಲ್‌ನಲ್ಲಿ 2–0ಯಿಂದ ಜಾರ್ಖಂಡ್ ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ಷಣ್ಮುಗಪ್ರಿಯಾ ಹೆಸರಿನ ಇಬ್ಬರು ಬಾಲಕಿಯರು ತಲಾ ಒಂದು ಗೋಲು ದಾಖಲಿಸಿದರು. ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ನಲ್ಲಿ ತಮಿಳುನಾಡು ಬಾಲಕಿಯರು 65–62ರಿಂದ ಕರ್ನಾಟಕದ ಆಟಗಾರ್ತಿಯರನ್ನು ಮಣಿಸಿ ಫೈನಲ್‌ಗೆ ಕಾಲಿಟ್ಟರು. ಪಂಜಾಬ್ ತಂಡವು 74–46ರಿಂದ ರಾಜಸ್ಥಾನಕ್ಕೆ ಸೋಲುಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.