ಮಿಥುನ್‌, ಪ್ರತೀಕ್‌, ಪ್ರಕಾಶ್‌ಗೆ ಹೆಚ್ಚು ಬೆಲೆ ಬೆಂಗಳೂರು: ಯುವ ಆಟಗಾರರಾದ ಮಿಥುನ್‌ ಮಂಜುನಾಥ್‌, ಸಾಯ್‌ ಪ್ರತೀಕ್‌ ಮತ್ತು ಪ್ರಕಾಶ್‌ ರಾಜ್ ಅವರು ಚೊಚ್ಚಲ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌ನ (ಜಿಪಿಬಿಎಲ್‌) ’ಬೆಲೆಯುಳ್ಳ‘ ಸ್ಪರ್ಧಿಗಳು ಎನಿಸಿಕೊಂಡರು. ಜಿಪಿಬಿಎಲ್‌ನ ಮೊದಲ ಋತುವಿನ ಟೂರ್ನಿಗೆ ಎಂಟು ತಂಡಗಳಿಗೆ ಆಟಗಾರರ ಆಯ್ಕೆಗಾಗಿ ಹರಾಜು ಪ್ರಕ್ರಿಯೆ ಭಾನುವಾರ ನಡೆಯಿತು. ಮಿಥುನ್‌, ಪ್ರತೀಕ್‌ ಮತ್ತು ಪ್ರಕಾಶ್‌ ಅವರನ್ನು ಕ್ರಮವಾಗಿ ಮಲ್ನಾಡ್‌ ಫಾಲ್ಕನ್ಸ್, ಮಂಡ್ಯ ಬುಲ್ಸ್‌ ಹಾಗೂ ಕೆಜಿಎಫ್‌ ವೂಲ್ವ್ಸ್‌ ತಂಡಗಳು ₹ 3.5 ಲಕ್ಷ ನೀಡಿ ತಮ್ಮದಾಗಿಸಿಕೊಂಡವು. ಇತರ ಐಕಾನ್‌ ಆಟಗಾರರಾದ ಸನೀತ್ ದಯಾನಂದ್ (ಕೊಡಗು ಟೈಗರ್ಸ್, ₹ 2.6 ಲಕ್ಷ), ಡೇನಿಯಲ್‌ ಫರೀದ್ (ಬಂಡಿಪುರ ಟಸ್ಕರ್ಸ್, 3.1 ಲಕ್ಷ), ರಘು ಮರಿಸ್ವಾಮಿ (ಮಂಗಳೂರು ಶಾರ್ಕ್ಸ್‌, 3.3 ಲಕ್ಷ), ತಾನ್ಯಾ ಹೇಮಂತ್ (ಮೈಸೂರು ಪ್ಯಾಂಥರ್ಸ್, ₹3.2 ಲಕ್ಷ), ಜನನಿ ಅನಂತಕುಮಾರ್ (ಬೆಂಗಳೂರು ಲಯನ್ಸ್, ₹ 2.5 ಲಕ್ಷ) ಅವರು ಹರಾಜಿನಲ್ಲಿ ವಿವಿಧ ತಂಡಗಳ ಪಾಲಾದರು. ಐಕಾನ್‌ ಆಟಗಾರರಿಗೆ ₹ 2.5 ಲಕ್ಷ ಮೂಲಬೆಲೆ ಹಾಗೂ ₹ 3.5 ಲಕ್ಷ ಗರಿಷ್ಠ ಬೆಲೆ ನಿಗದಿಪಡಿಸಲಾಗಿತ್ತು. ಸಾಯ್‌ ಪ್ರತೀಕ್‌ ಅವರನ್ನು ಪಡೆದುಕೊಳ್ಳಲು ನಾಲ್ಕು ತಂಡಗಳು ಪೈಪೋಟಿ ನಡೆಸಿದವು. ಲಾಟರಿ ಎತ್ತಿದಾಗ ಮಂಡ್ಯ ಬುಲ್ಸ್‌ಗೆ ಅದೃಷ್ಟ ಒಲಿಯಿತು. ಆಟಗಾರರಿಗೆ ಗರಿಷ್ಠ ಬೆಲೆಯನ್ನೂ ನಿಗದಿಪಡಿಸಲಾಗಿತ್ತು. ಹರಾಜಿನಲ್ಲಿ ಕೆಲವು ಆಟಗಾರರ ಗರಿಷ್ಠ ಬೆಲೆ ತಲುಪಿದ ಬಳಿಕವೂ ಅವರನ್ನು ತಮ್ಮದಾಗಿಸಿಕೊಳ್ಳಲು 3–4 ತಂಡಗಳು ಪೈಪೋಟಿಯಲ್ಲಿರುತ್ತಿದ್ದವು. ಅವರು ಯಾವ ತಂಡ ಸೇರಬೇಕು ಎಂಬುದನ್ನು ಲಾಟರಿ ಎತ್ತುವ ಮೂಲಕ ನಿರ್ಧರಿಸಲಾಯಿತು. 14 ವರ್ಷದ ರುಜುಲಾ ರಾಮು ಅವರಿಗೆ ಕೊಡಗು ಟೈಗರ್ಸ್ ₹ 1.80 ಲಕ್ಷ ನೀಡಿದರೆ, ಲೀಗ್‌ನ ಅತಿ ಕಿರಿಯ ಆಟಗಾರ ಜಡೆ ಅನಿಲ್‌ ಅವರನ್ನು ಬಂಡಿಪುರ ಟೈಗರ್ಸ್‌ ₹ 30 ಸಾವಿರ ನೀಡಿ ತನ್ನದಾಗಿಸಿಕೊಂಡಿತು. ’ಹರಾಜು ಪ್ರಕ್ರಿಯೆ ಸುಗಮವಾಗಿ ನಡೆಯಿತು. ಎಲ್ಲ ಎಂಟು ತಂಡಗಳೂ ಸಮತೋಲನದಿಂದ ಕೂಡಿವೆ. ಕಣದಲ್ಲಿದ್ದ ಎಲ್ಲ ಆಟಗಾರರ ರ್‍ಯಾಂಕಿಂಗ್‌ ಮತ್ತು ಇತ್ತೀಚಿನ ಸಾಧನೆಯನ್ನು ನೋಡಿಕೊಂಡು ತಂಡಗಳು ಆಯ್ಕೆ ಮಾಡಿಕೊಂಡವು‘ ಎಂದು ಲೀಗ್ ನಿರ್ದೇಶಕರೂ ಆಗಿರುವ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಅರವಿಂದ್ ಭಟ್ ತಿಳಿಸಿದರು. ’ಮೊದಲ ಋತುವಿನಲ್ಲಿ ಕರ್ನಾಟಕದ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ 238 ಸ್ಪರ್ಧಿಗಳು ಹರಾಜಿನಲ್ಲಿ ಭಾಗವಹಿಸಿದ್ದರು. ಅವರನ್ನು 64 ಆಟಗಾರರು ಆಯ್ಕೆಯಾದರು‘ ಎಂದುಜಿಪಿಬಿಎಲ್ ಕಮಿಷನರ್‌ ಪ್ರಶಾಂತ್‌ ರೆಡ್ಡಿ ಹೇಳಿದರು. ಎಂಟು ತಂಡಗಳ ಮಾಲೀಕರು, ಪ್ರತಿನಿಧಿಗಳು ಮತ್ತು ಕೋಚ್‌ಗಳು ಹಾಗೂ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ಪದಾಧಿಕಾರಿಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಚೊಚ್ಚಲ ಜಿಪಿಬಿಎಲ್‌ ಟೂರ್ನಿ ಜುಲೈ 1ರಿಂದ 10ರ ವರೆಗೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.