ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ: ಆಸ್ಟ್ರೇಲಿಯಾ ಮಣಿಸಿದ ಭಾರತ ಸುಜೌ (ಚೀನಾ): ಭಾರತ ತಂಡ ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 4–1 ರಲ್ಲಿ ಮಣಿಸಿ ಅಲ್ಪ ಸಮಾಧಾನಪಟ್ಟುಕೊಂಡಿತು. ‘ಸಿ’ ಗುಂಪಿನ ಮೊದಲ ಎರಡು ಪಂದ್ಯಗಳಲ್ಲಿ ಚೀನಾ ತೈಪೆ ಮತ್ತು ಮಲೇಷ್ಯಾ ತಂಡಗಳ ಎದುರು ಕ್ರಮವಾಗಿ 1–4 ಹಾಗೂ 0–5 ರಲ್ಲಿ ಸೋತಿದ್ದ ಭಾರತ ತಂಡ ಈಗಾಗಲೇ ನಾಕೌಟ್‌ ರೇಸ್‌ನಿಂದ ಹೊರಬಿದ್ದಿತ್ತು. ಆಸ್ಟ್ರೇಲಿಯಾ ವಿರುದ್ಧದ ಹಣಾಹಣಿಯಲ್ಲಿ ಮೊದಲ ಪಂದ್ಯವನ್ನು ಸೋತರೂ, ಭಾರತದ ಆಟಗಾರರು ಬಳಿಕ ಪುಟಿದೆದ್ದು ನಿಂತರು. ಮೊದಲು ಕಣಕ್ಕಿಳಿದ ಮಿಶ್ರ ಡಬಲ್ಸ್‌ ಜೋಡಿ ಸಾಯಿ ಪ್ರತೀಕ್– ತನೀಷಾ ಕ್ರಾಸ್ತೊ 21–17, 14–21, 18–21 ರಲ್ಲಿ ಕೆನೆತ್‌ ಜೆ– ಗ್ರೊನ್ಯಾ ಸಮರ್‌ವಿವ್ ಎದುರು ಸೋತಿತು. ಬಳಿಕ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಎಚ್‌.ಎಸ್‌.ಪ್ರಣಯ್‌ 21–8, 21–8 ರಲ್ಲಿ ಜಾಕ್‌ ಯು ಅವರನ್ನು ಮಣಿಸಿ 1–1 ರಲ್ಲಿ ಸಮಬಲಕ್ಕೆ ಕಾರಣರಾದರು. ಬಳಿಕದ ಮೂರೂ ಪಂದ್ಯಗಳನ್ನು ಭಾರತ ಗೆದ್ದುಕೊಂಡಿತು. ಪಿ.ವಿ. ಸಿಂಧು ಬದಲು ಮಹಿಳೆಯರ ಸಿಂಗಲ್ಸ್‌ನಲ್ಲಿ ಅಡಿದ ಅನುಪಮಾ ಉಪಾಧ್ಯಾಯ 21–16, 21–18 ರಲ್ಲಿ ಟಿಫಾನಿ ಹೊ ಅವರನ್ನು ಸೋಲಿಸಿದರು. ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌– ಧ್ರುವ್‌ ಕಪಿಲಾ ಜೋಡಿ 21–11, 21–12 ರಲ್ಲಿ ರಿಕಿ ಟಾಂಗ್– ರಿಯಾನೆ ವಾಂಗ್‌ ಎದುರು ಗೆದ್ದಿತು. ಕೊನೆಯಲ್ಲಿ ನಡೆದ ಮಹಿಳೆಯರ ಡಬಲ್ಸ್‌ನಲ್ಲಿ ತನೀಷಾ ಕ್ರಾಸ್ತೊ– ಅಶ್ವಿನಿ ಪೊನ್ನಪ್ಪ 21–19, 21–13 ರಲ್ಲಿ ಕೈಟ್ಲಿನ್‌ ಎಯಾ– ಏಂಜೆಲಾ ಯು ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.