ಯೂತ್‌ ವೇಟ್‌ಲಿಫ್ಟಿಂಗ್: ಗುರುನಾಯ್ಡುಗೆ ಚಿನ್ನ ನವದೆಹಲಿ: ವೇಟ್‌ಲಿಫ್ಟರ್‌ ಗುರುನಾಯ್ಡು ಸನಪತಿ ಅವರು ಮೆಕ್ಸಿಕೊದ ಲಿಯೊನ್‌ನಲ್ಲಿ ನಡೆಯುತ್ತಿರುವ ಐಡಬ್ಲ್ಯುಎಫ್‌ ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದಿತ್ತ ಸಾಧನೆ ಮಾಡಿದರು. ಭಾನುವಾರ ರಾತ್ರಿ ನಡೆದ ಬಾಲಕರ 55 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಅವರು ಒಟ್ಟು 230 ಕೆ.ಜಿ (104 ಕೆ.ಜಿ+ 126 ಕೆ.ಜಿ) ಎತ್ತುವ ಮೂಲಕ ಅಗ್ರಸ್ಥಾನ ಪಡೆದುಕೊಂಡರು. ಸೌದಿ ಅರೇಬಿಯಾದ ಅಲಿ ಮಜೀದ್ (229 ಕೆ.ಜಿ) ಬೆಳ್ಳಿ ಗೆದ್ದರೆ, ಕಜಕಸ್ತಾನದ ಯೆರೆಸಿಲ್ ಉಮ್ರೊವ್ (224 ಕೆ.ಜಿ.) ಕಂಚು ತಮ್ಮದಾಗಿಸಿಕೊಂಡರು. 16 ವರ್ಷದ ಗುರುನಾಯ್ಡು ಅವರು 2020ರ ಏಷ್ಯನ್‌ ಯೂತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದುಕೊಂಡಿದ್ದರು. ಸೌಮ್ಯಾ ಎಸ್‌. ದಳವಿ ಅವರು ಬಾಲಕಿಯರ 45 ಕೆ.ಜಿ ವಿಭಾಗದಲ್ಲಿ ಒಟ್ಟು 148 ಕೆ.ಜಿ. ಎತ್ತಿ ಕಂಚು ಜಯಿಸಿದರು. ಫಿಲಿಪ್ಪೀನ್ಸ್‌ನ ರೋಸ್‌ ಕೆ ರಮೊಸ್ (155 ಕೆ.ಜಿ) ಮತ್ತು ವೆನಿಜುವೆಲದ ಕೆರ್ಲಿಸ್ ಎಂ.ಮಾಂಟಿಲ್ಲಾ (153 ಕೆ.ಜಿ. ಕ್ರಮವಾಗಿ ಮೊದಲ ಎರಡು ಸ್ಥಾನ ಗಳಿಸಿದರು. ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಇದುವರೆಗೆ ಒಟ್ಟು ನಾಲ್ಕು ಪದಕಗಳನ್ನು ಗೆದ್ದುಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.