ಇಂಡೊನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು, ಸೇನ್ ಶುಭಾರಂಭ ಜಕಾರ್ತ, ಇಂಡೊನೇಷ್ಯಾ: ಭಾರತದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಇಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಸಿಂಧು 18–21, 21–5, 21–11ರಿಂದ ಡೆನ್ಮಾರ್ಕ್‌ನ ಲಿನೆ ಕ್ರಿಸ್ಟೊಫರ್ಸನ್ ಸವಾಲು ಮೀರಿದರು. 51 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೊದಲ ಗೇಮ್‌ ಸೋತ ಭಾರತದ ಆಟಗಾರ್ತಿ ನಂತರ ಪ್ರಾಬಲ್ಯ ಮೆರೆದರು. ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ಮುಂದಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಲಕ್ಷ್ಯ ಸೇನ್ ಅವರು ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ 21-10, 21-18ರಿಂದ ಡೆನ್ಮಾರ್ಕ್‌ನ ಹ್ಯಾನ್ಸ್ ಕ್ರಿಸ್ಟಿಯನ್‌ ಸೋಲ್ಬರ್ಗ್‌ ವಿಟಿಂಗಸ್‌ ಅವರನ್ನು ಮಣಿಸಿದರು. ಆಕರ್ಷಿಗೆ ನಿರಾಸೆ: ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಆಕರ್ಷಿ ಕಶ್ಯಪ್‌12-21, 11-21ರಿಂದ ಅಮೆರಿಕದ ಬಿವೆನ್ ಜಾಂಗ್ ಎದುರು ಎಡವಿದರೆ, ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್ ವರ್ಮಾ17-21, 15-21ರಿಂದ ಸ್ಥಳೀಯ ಆಟಗಾರ ಚಿಕೊ ಔರಾ ದ್ವಿ ವರ್ದೊಯೊ ಎದುರು ನಿರಾಸೆ ಅನುಭವಿಸಿದರು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಇಶಾನ್‌ ಭಟ್ನಾಗರ್– ತನಿಶಾ ಕ್ರಾಸ್ತೊ ಜೋಡಿ ಜಿದ್ದಾಜಿದ್ದಿನ ಹೋರಾಟದಲ್ಲಿ14-21, 21-16, 12-21ರಿಂದ ಇಂಡೊನೇಷ್ಯಾದ ಪ್ರವೀಣ್ ಜೋರ್ಡಾನ್‌ ಮತ್ತು ಮೆಲಾಟಿ ದಿವಾ ಒಕ್ಟಾವಿಯಾಂಟಿ ಎದುರು ಕೈಚೆಲ್ಲಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.