ಸೈಕ್ಲಿಂಗ್‌: ಸೆಮಿಫೈನಲ್‌ಗೆ ರೊನಾಲ್ಡೊ ನವದೆಹಲಿ: ವಿಶ್ವ ಜೂನಿಯರ್ ಚಾಂಪಿಯನ್‌ ಮತ್ತು ಏಷ್ಯನ್‌ ದಾಖಲೆ ಹೊಂದಿರುವ ರೊನಾಲ್ಡೊ ಸಿಂಗ್‌ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ಸ್ಪ್ರಿಂಟ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು. ಬುಧವಾರ ನಡೆದ ಪ್ರಾಥಮಿಕ ಸುತ್ತಿನ ಹಣಾಹಣಿಯಲ್ಲಿ ರೊನಾಲ್ಡೊ, ಕೊರಿಯಾದ ಜೀ ಒನ್‌ ಪಾರ್ಕ್‌ ಅವರನ್ನು ಮಣಿಸಿದರು. ನಾಲ್ಕರಘಟ್ಟದಲ್ಲಿ ಅವರು ಕಜಕಸ್ತಾನದ ಆಂಡ್ರೆ ಚುಗೇ ಸವಾಲು ಎದುರಿಸುವರು. ಚಾಂಪಿಯನ್‌ಷಿಪ್‌ನ ನಾಲ್ಕನೇ ದಿನ ಆರು ವಿಭಾಗಗಳಲ್ಲಿ ಫೈನಲ್‌ ನಡೆದರೂ ಭಾರತಕ್ಕೆ ಯಾವುದೇ ಪದಕ ದಕ್ಕಲಿಲ್ಲ. ಜೂನಿಯರ್‌ ವಿಭಾಗದ 7.5 ಕಿ.ಮೀ. ಸ್ಕ್ರ್ಯಾಚ್‌ ರೇಸ್‌ನಲ್ಲಿ ಹಿಮಾಂಶಿ ಸಿಂಗ್‌ ಎರಡನೇ ಸ್ಥಾನ ಗಳಿಸಿದರಾದರೂ, ಅಪಾಯಕಾರಿ ರೀತಿಯಲ್ಲಿ ಸೈಕ್ಲಿಂಗ್‌ ಮಾಡಿದ್ದಕ್ಕೆ ಅವರನ್ನು ಅನರ್ಹಗೊಳಿಸಲಾಯಿತು. ಹರ್ಷವೀರ್‌ ಸಿಂಗ್‌ 30 ಸಾವಿರ ಮೀ. ಪಾಯಿಂಟ್ಸ್‌ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಎರಡು ಚಿನ್ನ, ಐದು ಬೆಳ್ಳಿ ಮತ್ತು 13 ಕಂಚಿನ ಪದಕಗಳೊಂದಿಗೆ ಭಾರತ ಒಟ್ಟಾರೆಯಾಗಿ ಐದನೇ ಸ್ಥಾನದಲ್ಲಿದೆ. 11 ಚಿನ್ನ ಗೆದ್ದಿರುವ ಜಪಾನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.