ಲಕ್ಷ್ಯ ಸೇನ್‌, ಸಿಂಧುಗೆ ನಿರಾಸೆ ಜಕಾರ್ತ (ಪಿಟಿಐ): ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್‌ ಅವರು ಇಂಡೊನೇಷ್ಯಾ ಓಪನ್‌ ಸೂಪರ್ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಭಾರತದ ಸವಾಲು ಕೊನೆಗೊಂಡಿದೆ. ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಸಿಂಧು 12-21, 10-21 ರಲ್ಲಿ ಥಾಯ್ಲೆಂಡ್‌ನ ರಚನೊಕ್ ಇಂತನನ್‌ ಎದುರು ಸೋತರು. ಈ ಪಂದ್ಯ 33 ನಿಮಿಷಗಳಲ್ಲಿ ಕೊನೆಗೊಂಡಿತು. ಸಿಂಧು ಅವರಿಗೆ ಥಾಯ್ಲೆಂಡ್‌ನ ಆಟಗಾರ್ತಿ ಕೈಯಲ್ಲಿ ಎದುರಾದ ಸತತ ಐದನೇ ಸೋಲು ಇದು. ಇವರಿಬ್ಬರ ನಡುವಿನ ಒಟ್ಟಾರೆ ಹಣಾಹಣಿಯಲ್ಲಿ ರಚನೊಕ್‌ 9–4 ರಲ್ಲಿ ಮೇಲುಗೈ ಸಾಧಿಸಿದ್ದಾರೆ. ಕಳೆದ ತಿಂಗಳು ನಡೆದ ಥಾಯ್ಲೆಂಡ್‌ ಓಪನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತಿದ್ದ ಸಿಂಧು, ಇಲ್ಲಿ ಎರಡೂ ಗೇಮ್‌ಗಳಲ್ಲಿ ಎದುರಾಳಿಗೆ ಪೈಪೋಟಿ ನೀಡುವಲ್ಲಿ ವಿಫಲರಾದರು. ಮೊದಲ ಗೇಮ್‌ ಸುಲಭದಲ್ಲಿ ಗೆದ್ದ ರಚನೊಕ್‌, ಎರಡನೇ ಗೇಮ್‌ನ ಆರಂಭದಲ್ಲೇ 10 ಪಾಯಿಂಟ್‌ಗಳ ಮುನ್ನಡೆ ಗಳಿಸಿದರು. ಆ ಬಳಿಕವೂ ಆಕ್ರಮಣಕಾರಿ ಆಟ ಮುಂದುವರೆಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಭಾರತದ ಯುವ ಆಟಗಾರ ಲಕ್ಷ್ಯ16–21, 21–12, 14–21 ರಲ್ಲಿ ಚೀನಾ ತೈಪೆಯ ಚೌ ಟಿಯೆನ್ ಚೆನ್‌ ಕೈಯಲ್ಲಿ ಪರಾಭವಗೊಂಡರು. ಮೊದಲ ಗೇಮ್‌ ಸೋತ ಭಾರತದ ಆಟಗಾರ ಎರಡೇ ಗೇಮ್‌ ಗೆದ್ದು ಸಮಬಲ ಸಾಧಿಸಿದರು. ಮೂರನೇ ಗೇಮ್‌ನಲ್ಲಿ ನಿರಾಸೆ ಅನುಭವಿಸಿದರು. ಸೇನ್‌ ಅವರು ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಚೌ ಎದುರು ಸೋತಿದ್ದಾರೆ. ಥಾಮಸ್‌ ಕಪ್‌ ಟೂರ್ನಿಯಲ್ಲೂ ಅವರು ಇದೇ ಎದುರಾಳಿ ಕೈಯಲ್ಲಿ ಪರಾಭವಗೊಂಡಿದ್ದರು. ವಿಶ್ವದ ಅಗ್ರ ರ್‍ಯಾಂಕಿಂಗ್‌ನ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸನ್‌ ಅವರು 21-13, 21-9 ರಲ್ಲಿ ಹಾಂಕಾಂಗ್‌ನ ಅಂಗಸ್ ಕಾ ಲಾಂಗ್‌ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.