ಸಿಂಗಪುರ ಈಜು: ಶ್ರೀಹರಿ, ಅನೀಶ್‌ಗೆ ಚಿನ್ನ ಸಿಂಗಪುರ: ಒಲಿಂಪಿಯನ್‌ ಶ್ರೀಹರಿ ನಟರಾಜನ್ ಮತ್ತು ಮಾನಾ ಪಟೇಲ್ ಅವರು ಗುರುವಾರ ಇಲ್ಲಿ ಆರಂಭವಾದ ಸಿಂಗಪುರ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು. ಸ್ಪರ್ಧೆಯ ಮೊದಲ ದಿನದಂದು ಭಾರತಕ್ಕೆ ಒಟ್ಟು ಐದು ಪದಕಗಳು ಒಲಿದವು. ಕನ್ನಡಿಗ ಶ್ರೀಹರಿ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ 55.32 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನ ಗಳಿಸಿದರು. ಭಾರತದ ಶಿವ ಶ್ರೀಧರ್ ಕಂಚಿನ ಪದಕ ಪಡೆದರು. ಮಹಿಳೆಯರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಮಾನಾ (1ನಿ,4.47ಸೆ) ಬೆಳ್ಳಿ ಪದಕ ಪಡೆದರು. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ (ಎ ದರ್ಜೆ) ಭಾರತದ ಅತಿ ಕಿರಿಯ ವಯಸ್ಸಿನ ಈಜುಪಟು ಎಂಬ ಹೆಗ್ಗಳಿಕೆ ಇರುವ ಶ್ರೀಹರಿ ಸಿಂಗಪುರ ಈಜುಕೊಳದಲ್ಲಿ ಪಾರಮ್ಯ ಮೆರೆದರು. 50 ಮೀಟರ್ಸ್ ಬಟರ್‌ಫ್ಲೈನಲ್ಲಿ ಮಿಹೀರ್ ಆಂಬ್ರೆ (24.66ಸೆ) ಹಾಗೂ 800 ಮೀ ಫ್ರೀಸ್ಟೈಲ್‌ನಲ್ಲಿ ಅನೀಶ್ ಗೌಡ (8ನಿ,14.08ಸೆ) ಚಿನ್ನದ ಸಾಧನೆ ಮಾಡಿದರು. ಅನೀಶ್ ಅವರು ಕಠಿಣ ಪೈಪೋಟಿ ಎದುರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.