ಇಂಡೊನೇಷ್ಯಾ ಸೂಪರ್‌ ಸೀರಿಸ್‌: ಲಕ್ಷ್ಯ ಸೇನ್‌ಗೆ ಸೋಲುಣಿಸಿದ ಪ್ರಣೋಯ್ ಜಕಾರ್ತ: ಭಾರತದ ಇಬ್ಬರು ಬ್ಯಾಡ್ಮಿಂಟನ್‌ ಆಟಗಾರರ ನಡುವಿನ ಪೈಪೋಟಿಯಲ್ಲಿ ಎಚ್‌.ಎಸ್‌.ಪ್ರಣೋಯ್‌ ಗೆಲುವಿನ ನಗು ಬೀರಿದರೆ, ಲಕ್ಷ್ಯ ಸೇನ್‌ ಆಘಾತ ಅನುಭವಿಸಿದರು. ಇಂಡೊನೇಷ್ಯಾ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಬುಧವಾರ ಪ್ರಣೋಯ್‌ ಅವರು 21–10, 21–9 ರಲ್ಲಿ ಸೇನ್‌ ವಿರುದ್ಧ ಗೆದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ಸೇನ್‌, ಹೆಚ್ಚಿನ ಪ್ರತಿರೋಧ ಒಡ್ಡದೆ 34 ನಿಮಿಷಗಳಲ್ಲಿ ಸೋಲು ಒಪ್ಪಿಕೊಂಡರು. ಈ ವರ್ಷದ ಆರಂಭದಿಂದಲೂ ಅತ್ಯುತ್ತಮ ಆಟ ಪ್ರದರ್ಶಿಸುತ್ತಿರುವ ಸೇನ್, ತಮ್ಮ ಚೊಚ್ಚಲ ಸೂಪರ್‌ ಸೀರಿಸ್‌–500 ಟ್ರೋಫಿ ಜಯಿಸಿದ್ದರು. ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪ್ರವೇಶಿಸಿದ್ದರಲ್ಲದೆ, ಥಾಮಸ್‌ ಕಪ್‌ ಗೆದ್ದ ಭಾರತ ಪುರುಷರ ತಂಡದ ಭಾಗವಾಗಿದ್ದರು. ಅರ್ಜುನ್‌–ಧ್ರುವ್‌ಗೆ ಜಯ: ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಎಂ.ಆರ್‌.ಅರ್ಜುನ್‌ ಮತ್ತು ಧ್ರುವ್‌ ಕಪಿಲ ಜೋಡಿ 27–25, 18–25, 21–19 ರಲ್ಲಿ ರ‍್ಯಾಂಕಿಂಗ್‌ನಲ್ಲಿ ತಮಗಿಂತ ಮೇಲಿನ ಸ್ಥಾನದಲ್ಲಿರುವ ಜಪಾನ್‌ನ ಜೋಡಿ ಕೆಲಿಚಿರೊ ಮತ್ಸುಯ್– ಯೊಶಿನೊರಿ ತಕೆಯುಚಿ ವಿರುದ್ಧ ಜಯ ಸಾಧಿಸಿತು. ಈ ಹೋರಾಟ 1 ಗಂಟೆ 23 ನಿಮಿಷ ನಡೆಯಿತು. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಭಟ್‌ ಮತ್ತು ಶಿಖಾ ಭಟ್‌ ಸೋತು ಹೊರಬಿದ್ದರು. ಅವರು 9–21, 10–21 ರಲ್ಲಿ ಚೀನಾದ ಜಾಂಗ್ ಶು ಕ್ಸಿಯಾನ್ ಹಾಗೂ ಜೆಂಗ್ ಯು ಕೈಯಲ್ಲಿ ಪರಾಭವಗೊಂಡರು. ಈ ಪಂದ್ಯ 28 ನಿಮಿಷಗಳಲ್ಲಿ ಕೊನೆಗೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.