ಟಿಟಿ: ಸತ್ಯನ್‌ಗೆ ನಿರಾಸೆ ನವದೆಹಲಿ : ಕ್ರೊವೇಷ್ಯದ ಜಗ್ರೆಬ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಕಂಟೆಂಡರ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಸತ್ಯನ್‌ ಜ್ಞಾನೇಶ್ವರನ್‌ ಅವರ ಅಮೋಘ ಆಟಕ್ಕೆ ತೆರೆಬಿದ್ದಿದೆ. ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಆಟಗಾರ 7–11, 9–11, 5–11 ರಲ್ಲಿ ವಿಶ್ವದ 18ನೇ ರ‍್ಯಾಂಕ್‌ನ ಆಟಗಾರ ಚೀನಾದ ಚುವಾಂಗ್ ಚಿ ಯುವಾನ್‌ ಎದುರು ಸೋತರು. ಇದಕ್ಕೂ ಮುನ್ನ ನಡೆದಿದ್ದ 16ರ ಘಟ್ಟದ ಪಂದ್ಯದಲ್ಲಿ ಸತ್ಯನ್ 11–9, 11–7, 12–10 ರಲ್ಲಿ ಚೀನಾದ 16 ವರ್ಷದ ಆಟಗಾರ ಚೆನ್‌ ಯುವಾನ್‌ಯು ಅವರನ್ನು ಮಣಿಸಿದ್ದರು. ಸತ್ಯನ್‌ ಮೊದಲ ಸುತ್ತಿನ ಹಣಾಯಣಿಯಲ್ಲಿ ವಿಶ್ವದ 6ನೇ ರ‍್ಯಾಂಕ್‌ನ ಆಟಗಾರ, ಸ್ಲೊವೇನಿಯದ ಜಾರ್ಜಿಕ್ ಡಾರ್ಕೊ ಅವರಿಗೆ ಆಘಾತ ನೀಡಿದ್ದರು. ಆದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಅವರಿಗೆ ನಿರೀಕ್ಷಿತ ಪ್ರದರ್ಶನ ನೀಡಲು ಆಗಲಿಲ್ಲ. ಬರ್ಮಿಂಗ್‌ಹ್ಯಾಂನಲ್ಲಿ ಜುಲೈ 28 ರಿಂದ ಆಗಸ್ಟ್‌ 8ರ ವರೆಗೆ ನಡೆಯಲಿರುವ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಳ್ಳುವ ಭಾರತ ಟಿಟಿ ತಂಡದಲ್ಲಿ ಸತ್ಯನ್‌ ಅವರು ಸ್ಥಾನ ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.