ವಿಕ್ಟರ್‌ ಆಕ್ಸೆಲ್ಸೆನ್ ಚಾಂಪಿಯನ್‌ ಜಕಾರ್ತ (ಎಎಫ್‌ಪಿ): ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರ, ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್‌ ಅವರು ಇಂಡೊನೇಷ್ಯಾ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್ ಆದರು. ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅವರು 21–9, 21–10 ರಲ್ಲಿ ಚೀನಾದ ಜಾವೊ ಜುನ್‌ ಅವರನ್ನು ಮಣಿಸಿದರು. ಎರಡೂ ಗೇಮ್‌ಗಳಲ್ಲಿ ಶಿಸ್ತಿನ ಆಟವಾಡಿದ ಆಕ್ಸೆಲ್ಸೆನ್, ಕೇವಲ 38 ನಿಮಿಷಗಳಲ್ಲಿ ಜಯ ಸಾಧಿಸಿ ಇಲ್ಲಿ ತಮ್ಮ ಸತತ ಎರಡನೇ ಕಿರೀಟ ಮುಡಿಗೇರಿಸಿಕೊಂಡರು. ಪ್ರಮುಖ ಆಟಗಾರರಿಗೆ ಆಘಾತ ನೀಡಿ ಫೈನಲ್‌ ಪ್ರವೇಶಿಸಿದ್ದ ಜಾವೊ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದು ಮುಳುವಾಗಿ ಪರಿಣಮಿಸಿತು. ಮೇಲಿಂದ ಮೇಲೆ ಸ್ವಯಂಕೃತ ತಪ್ಪುಗಳನ್ನು ಮಾಡಿ, ಸೋಲಿನ ಹಾದಿ ಹಿಡಿದರು. ಜು ಯಿಂಗ್‌ ಚಾಂಪಿಯನ್‌: ತೈವಾನ್‌ನ ತಾಯ್ ಜು ವಿಂಗ್‌, ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಫೈನಲ್‌ನಲ್ಲಿ ಅವರು 21–23, 21–6, 21–5 ರಲ್ಲಿ ಚೀನಾದ ವಾಂಗ್‌ ಜಿ ಯಿ ವಿರುದ್ಧ ಗೆದ್ದರು. ಜಿದ್ದಾಜಿದ್ದಿನ ಸೆಣಸಾಟದ ಬಳಿಕ ಮೊದಲ ಗೇಮ್‌ ಕಳೆದುಕೊಂಡ ಜು ವಿಂಗ್, ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿ ಸಮಬಲ ಸಾಧಿಸಿದರು. ನಿರ್ಣಾಯಕ ಮೂರನೇ ಗೇಮ್‌ನಲ್ಲೂ ಶಿಸ್ತಿನ ಆಟವಾಡಿ ಪ್ರಶಸ್ತಿ ಜಯಿಸಿದರು. ಈ ಪಂದ್ಯ ಭರ್ತಿ ಒಂದು ಗಂಟೆ ನಡೆಯಿತು. ಪುರುಷರ ಡಬಲ್ಸ್‌ನಲ್ಲಿ ಚೀನಾದ ಚೆನ್‌ ಲಿಯು ಯು–ಯು ಉ ಕ್ಸುವಾನ್‌, ಮಹಿಳೆಯರ ಡಬಲ್ಸ್‌ನಲ್ಲಿ ಜಪಾನ್‌ನ ಮತ್ಸಯಮ ನಮಿ– ಶಿದಾ ಚಿಹರು, ಮಿಶ್ರ ಡಬಲ್ಸ್‌ನಲ್ಲಿ ಚೀನಾದ ವಿ ಜೆಂಗ್‌ ಸಿ– ಕ್ವಿಯಾಂಗ್‌ ಹುವಾಂಗ್ ಯಾ ಜೋಡಿ ಪ್ರಶಸ್ತಿ ಗೆದ್ದುಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.