ವಾಟರ್‌ ಪೋಲೊ: ಸರ್ವಿಸಸ್‌ಗೆ ಪ್ರಶಸ್ತಿ ಬೆಂಗಳೂರು: ಸರ್ವಿಸಸ್‌ ತಂಡದವರು ಇಲ್ಲಿ ಕೊನೆಗೊಂಡ 76ನೇ ರಾಷ್ಟ್ರೀಯ ಡೈವಿಂಗ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಬಸವನಗುಡಿ ಈಜುಕೇಂದ್ರದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಸರ್ವಿಸಸ್‌ 12–10 ಗೋಲುಗಳಿಂದ ರೈಲ್ವೇಸ್‌ ತಂಡವನ್ನು ಮಣಿಸಿತು. ಪೊಲೀಸ್‌ ತಂಡ, ಕಂಚಿನ ಪದಕ ತನ್ನದಾಗಿಸಿಕೊಂಡಿತು. ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಪೊಲೀಸ್‌ ತಂಡವನ್ನು 9–8 ರಲ್ಲಿ ಮಣಿಸಿದ ಕೇರಳ ತಂಡ ಚಾಂಪಿಯನ್‌ ಅದರೆ, ಮಹಾರಾಷ್ಟ್ರ ತಂಡ ಮೂರನೇ ಸ್ಥಾನ ಗಳಿಸಿತು. ಪುರುಷರ ವಿಭಾಗದಲ್ಲಿ ಸರ್ವಿಸಸ್‌ನ ತಪಸ್‌ ಮೊಂಡಲ್‌ ಮತ್ತು ಮಹಿಳೆಯರ ವಿಭಾಗದಲ್ಲಿ ಕೇರಳದ ಆರ್‌.ಆರ್‌.ಕೃಪಾ ಅವರು ‘ಶ್ರೇಷ್ಠ ಸ್ಪರ್ಧಿಗಳು’ ಗೌರವಕ್ಕೆ ಪಾತ್ರರಾದರು. ಪಲಕ್‌, ಸುರಜಿತ್‌ ಮಿಂಚು: ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ಡೈವಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸರ್ವಿಸಸ್‌ನ ಸುರಜಿತ್‌ ರಾಜಬನ್ಶಿ, ಪುರುಷರ 3ಮೀ. ಸ್ಪ್ರಿಂಗ್‌ಬೋರ್ಡ್‌ನಲ್ಲಿ ಅಗ್ರಸ್ಥಾನ ಪಡೆದರು. ಅವರು 333. 20 ಪಾಯಿಂಟ್ಸ್‌ ಸಂಗ್ರಹಿಸಿದರು. ಉತ್ತರ ಪ್ರದೇಶದ ಸತೀಶ್‌ ಕುಮಾರ್‌ ಪ್ರಜಾಪತಿ ಹಾಗೂ ಸರ್ವಿಸಸ್‌ನ ಲಂಡನ್‌ ಸಿಂಗ್‌ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಮಧ್ಯಪ್ರದೇಶದ ಪಲಕ್‌ ಶರ್ಮಾ (181.60 ಪಾಯಿಂಟ್ಸ್) ತಮ್ಮದಾಗಿಸಿಕೊಂಡರು. ರೈಲ್ವೇಸ್‌ನ ಇಶಾ ವಾಘ್ಮೋರೆ ಮತ್ತು ಹೃತಿಕಾ ಶ್ರೀರಾಮ್‌ ಬಳಿಕದ ಸ್ಥಾನಗಳನ್ನು ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.