ಬ್ಯಾಸ್ಕೆಟ್‌ಬಾಲ್: ಕೆಎಸ್‌ಪಿಗೆ ಭರ್ಜರಿ ಜಯ ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್‌ (ಕೆಎಸ್‌ಪಿ) ತಂಡವು ಎಂ.ಸಿ. ಶ್ರೀನಿವಾಸ್ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಬಿ ಡಿವಿಷನ್‌ ಲೀಗ್‌ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿಕೆಎಸ್‌ಪಿ 81–56ರಿಂದ ರಾಜ್‌ಮಹಲ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ಎದುರು ಗೆದ್ದಿತು. ವಿಜೇತ ತಂಡದ ಪರ ಮನೋಜ್‌ (31 ಪಾಯಿಂಟ್ಸ್) ಮತ್ತು ನವೀನ್ ಮಿಂಚಿದರು. ರಾಜ್‌ಮಹಲ್ ತಂಡಕ್ಕಾಗಿ ರೋಹಿತ್‌ ಮತ್ತು ಶಿಶಿರ್‌ ತಲಾ12 ಪಾಯಿಂಟ್ಸ್ ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಸುಪ್ರದೀಪ್ ಗಳಿಸಿದ 40 ಪಾಯಿಂಟ್ಸ್ ನೆರವಿನಿಂದ ರೈಸಿಂಗ್ ಸ್ಟಾರ್ ಬಿ.ಸಿ. ಮೈಸೂರು ತಂಡವು 85–79ರಿಂದ ಕೋರಮಂಗಲ ಎಸ್‌ಸಿ ಎದುರು ಗೆದ್ದಿತು. ಕೋರಮಂಗಲ ಪರ ಗೋಕುಲ್‌ 30 ಪಾಯಿಂಟ್ಸ್ ಕಲೆಹಾಕಿದರು. ಇನ್ನುಳಿದ ಪಂದ್ಯಗಳಲ್ಲಿ ಜೆಎಸ್‌ಸಿ 101–82ರಿಂದ ಪ್ರೊಟೆಕ್ ಅಸೋಸಿಯೇಷನ್ ಮೈಸೂರು ಎದುರು, ಬಿಎಸ್‌ಎನ್‌ಎಲ್‌ 63–62ರಿಂದ ಬಾಷ್ ಎದುರು ರೋಚಕ ಜಯ ಸಾಧಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.