ಭಾರತದ ವಿಶ್ವಕಪ್ ಕನಸು ಭಗ್ನ ಟೆರಸ್ಸಾ, ಸ್ಪೇನ್‌: ಭಾರತ ಮಹಿಳಾ ಹಾಕಿ ತಂಡವು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ನಾಕೌಟ್‌ ಅರ್ಹತೆಗಾಗಿ ಸೋಮವಾರ ನಡೆದ ಹಣಾಹಣಿಯಲ್ಲಿ ಸವಿತಾ ಪೂನಿಯಾ ಬಳಗವು 0–1ರಿಂದ ಆತಿಥೇಯ ಸ್ಪೇನ್ ಎದುರು ಎಡವಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಉಭಯ ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಪಂದ್ಯ ಮುಕ್ತಾಯಗೊಳ್ಳಲು ಕೇವಲ ಮೂರು ನಿಮಿಷಗಳಿರುವಾಗ ಭಾರತ ತಂಡ ಗೋಲು ಬಿಟ್ಟುಕೊಟ್ಟು ಮರುಗಿತು. ಸ್ಪೇನ್‌ನ ಮಾರ್ಟಾ ಸೆಗು ಗೋಲು ದಾಖಲಿಸಿ ತಮ್ಮ ತಂಡದ ಗೆಲುವಿನ ಸಂಭ್ರಮಕ್ಕೆ ಕಾರಣರಾದರು. ಟೂರ್ನಿಯುದ್ದಕ್ಕೂ ಭಾರತ ತಂಡವು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಿನಲ್ಲಿ ಪರಿವರ್ತಿಸುವಲ್ಲಿ ಎಡವಿದ್ದಕ್ಕೆ ದಂಡ ತೆತ್ತಿತು. ಸ್ಪೇನ್ ಎದುರಿನ ಪಂದ್ಯದಲ್ಲಿ ನಾಲ್ಕು ಅವಕಾಶಗಳು ದೊರೆತರೂ ಯಶಸ್ಸು ಸಾಧಿಸಲು ಸವಿತಾ ಪಡೆಗೆ ಸಾಧ್ಯವಾಗಲಿಲ್ಲ. ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಮೊರೆಹೋದವು. ಸ್ವಯಂಕೃತ ತಪ್ಪುಗಳನ್ನೂ ಮಾಡಿದವು. ಹೀಗಾಗಿ ಗೋಲು ಗಳಿಕೆಯ ಅವಕಾಶಗಳು ಸೃಷ್ಟಿಯಾಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಸ್ಪೇನ್‌ ಆಕ್ರಮಣಕ್ಕೆ ಒತ್ತುಕೊಟ್ಟಿತು. ಆದರೆ ಭಾರತದ ನಾಯಕಿ, ಗೋಲ್‌ಕೀಪರ್ ಸವಿತಾ ಅವರ ಭದ್ರಕೋಟೆಯನ್ನು ಭೇದಿಸಲಾಗಲಿಲ್ಲ. ಇದೇ ಅವಧಿಯಲ್ಲಿ ಸಲಿಮಾ ಟೆಟೆ ನೀಡಿದ ಪಾಸ್‌ನಲ್ಲಿ ವಂದನಾ ಕಟಾರಿಯಾ ಗೋಲು ಗಳಿಸುವ ಅವಕಾಶವೊಂದು ಕೈತಪ್ಪಿತು. ಚೆಂಡು ಕ್ರಾಸ್‌ಬಾರ್‌ಗೆ ತಾಗಿ ಹಿಂದೆ ಬಂದಿತು. ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ತೀವ್ರ ಪೈಪೋಟಿಗೆ ಮುಂದಾದರೂ ಖಾತೆ ತೆರೆಯಲಾಗಲಿಲ್ಲ. ನಾಲ್ಕನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಕ್ಕೆ ಹಲವು ಅವಕಾಶಗಳು ಲಭಿಸಿದವು. 57ನೇ ನಿಮಿಷದಲ್ಲಿ ಮಾರ್ಟಾ ಯಶಸ್ಸು ಕಂಡರು. ಒಂಬತ್ತರಿಂದ 16ನೇ ಸ್ಥಾನಕ್ಕಾಗಿಮಂಗಳವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡವು ಕೆನಡಾಗೆ ಮುಖಾಮುಖಿಯಾಗಲಿದೆ. ಮಧ್ಯರಾತ್ರಿ 1 ಗಂಟೆಗೆ ಈ ಪಂದ್ಯ ನಡೆಯಲಿದೆ. ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ನ್ಯೂಜಿಲೆಂಡ್‌– ಜರ್ಮನಿ, ನೆದರ್ಲೆಂಡ್ಸ್–ಬೆಲ್ಜಿಯಂ, ಆಸ್ಟ್ರೇಲಿಯಾ–ಸ್ಪೇನ್‌, ಇಂಗ್ಲೆಂಡ್‌– ಅರ್ಜೆಂಟೀನಾ ಮುಖಾಮುಖಿಯಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.