ಕಾಮನ್‌ವೆಲ್ತ್ ಗೇಮ್ಸ್‌ಗೆ ‘ಸಿದ್ಧತೆ’ ಸಿಂಗಪುರ: ಭಾರತದ ಪಿ.ವಿ. ಸಿಂಧು ಮತ್ತು ಎಚ್‌.ಎಸ್. ಪ್ರಣಯ್ ಅವರು ಮಂಗಳವಾರ ಇಲ್ಲಿ ಆರಂಭವಾಗುವ ಸಿಂಗಪುರ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. ಇದೇ 28ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಿದ್ಧತೆಯಾಗಿ ಈ ಟೂರ್ನಿಯನ್ನು ಭಾರತದ ಆಟಗಾರರು ಬಳಸಿಕೊಳ್ಳಲಿದ್ದಾರೆ. ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಸಿಂಧು, ಮೊದಲ ಪಂದ್ಯದಲ್ಲಿ ಬೆಲ್ಜಿಯಂನ ಲಿಯೆನ್ ಟ್ಯಾನ್ ಅವರನ್ನು ಎದುರಿಸುವರು. ಪ್ರಣಯ್‌ ಅವರು ಥಾಯ್ಲೆಂಡ್‌ನ ಸಿತ್ತಿಕೊಮ್ ಥಮಾಸಿನ್ ವಿರುದ್ಧ ಆಡುವರು. ಸೈನಾ ನೆಹ್ವಾಲ್‌ ಅವರು ಭಾರತದವರೇ ಆದ ಮಾಳವಿಕಾ ಬನ್ಸೋದ್‌ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಕಿದಂಬಿ ಶ್ರೀಕಾಂತ್‌ ಅವರು ಬಿ.ಸಾಯಿ ಪ್ರಣೀತ್ ಎದುರು ಆಡುವರು. ಪುರುಷರ ಸಿಂಗಲ್ಸ್‌ನಲ್ಲಿ ಪರುಪಳ್ಳಿ ಕಶ್ಯಪ್‌, ಸಮೀರ್‌ ವರ್ಮಾ, ಡಬಲ್ಸ್‌ನಲ್ಲಿ ಕೃಷ್ಣಪ್ರಸಾದ್ ಗರಗ–ವಿಷ್ಣುವರ್ಧನ ಗೌಡ್‌ ಪಂಜಾಲ, ಧೃವ ಕಪಿಲ– ಎಂ.ಆರ್‌.ಅರ್ಜುನ್‌ ಕಣಕ್ಕಿಳಿಯುವರು. ಮಹಿಳಾ ಡಬಲ್ಸ್‌ನಲ್ಲಿ ಪೂಜಾ ದಂಡು– ಆರತಿ ಸಾರಾ, ಸಿಮ್ರಾನ್ ಸಿಂಘಿ– ರಿತಿಕಾ ಥಾಕರ್, ಮಿಶ್ರ ಡಬಲ್ಸ್‌ನಲ್ಲಿ ನಿತಿನ್ ಎಚ್‌.ವಿ. – ಪೂರ್ವಿಶಾ ರಾಮ್‌, ವೆಂಕಟ ಗೌರವ್ ಪ್ರಸಾದ್‌– ಜೂಹಿ ದೇವಾಂಗನ್ ಆಡುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.