ವಿಶ್ವಕಪ್‌ ಶೂಟಿಂಗ್‌: ಅರ್ಜುನ್‌ಗೆ ಚಿನ್ನ ಚಾಂಗ್ವಾನ್‌, ದಕ್ಷಿಣ ಕೊರಿಯಾ (ಪಿಟಿಐ): ಭಾರತದ ಅರ್ಜುನ್ ಬಬೂತಾ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟರು. ಸೋಮವಾರ ನಡೆದ ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌ ವಿಭಾಗದಲ್ಲಿ ಅವರು ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಸ್ಪರ್ಧಿ ಅಮೆರಿಕದ ಲೂಕಸ್ ಕೊಜೆನಿಸ್ಕಿ ವಿರುದ್ಧ 17–9 ಪಾಯಿಂಟ್ಸ್‌ನಿಂದ ಗೆದ್ದರು. ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಇದು. ಪಂಜಾಬ್‌ನ 23 ವರ್ಷದ ಅರ್ಜುನ್‌ ಅವರು ಸೀನಿಯರ್ ವಿಭಾಗದಲ್ಲಿ ಗೆದ್ದ ಮೊದಲ ಚಿನ್ನ ಇದಾಗಿದೆ. 2016 ರಲ್ಲಿ ನಡೆದಿದ್ದ ಜೂನಿಯರ್‌ ವಿಶ್ವಕಪ್‌ನಲ್ಲಿ ಅವರು ಚಿನ್ನ ಜಯಿಸಿದ್ದರು. ರ್‍ಯಾಂಕಿಂಗ್ ರೌಂಡ್‌ನಲ್ಲಿ 261.1 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದು ಅವರು ಚಿನ್ನದ ಪದಕದ ಪೈಪೋಟಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇಸ್ರೇಲ್‌ನ ಸೆರ್ಗಿ ರಿಕ್ಟೆರ್‌ ಕಂಚು ಜಯಿಸಿದರು. ಕಣದಲ್ಲಿದ್ದ ಭಾರತದ ಇನ್ನೊಬ್ಬ ಶೂಟರ್‌ ಪಾರ್ಥ್‌ ಮಖೀಜಾ ನಾಲ್ಕನೇ ಸ್ಥಾನ ಪಡೆದುಕೊಂಡರು. ಫೈನಲ್‌ನಲ್ಲಿ ನಿಖರ ಗುರಿ ಹಿಡಿದ ಅರ್ಜುನ್‌ ಮೊದಲ ಏಳು ಅವಕಾಶಗಳ ಬಳಿಕ 10–4 ರಲ್ಲಿ ಮುನ್ನಡೆಯಲ್ಲಿದ್ದರು. ಆ ಬಳಿಕವೂ ಉತ್ತಮ ಪ್ರದರ್ಶನ ಮುಂದುವರಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಆಸ್ಟ್ರಿಯದ ಥಾಮಸ್‌ ಫಾರ್ಕಿನ್‌ ಅವರು ಭಾರತ ರಾಷ್ಟ್ರೀಯ ಶೂಟಿಂಗ್‌ ತಂಡದ ಕೋಚ್‌ ಆಗಿ ನೇಮಕಗೊಂಡ ಬಳಿಕ ದೊರೆತ ಮೊದಲ ಅಂತರರಾಷ್ಟ್ರೀಯ ಪದಕ ಇದು. ವಿಶ್ವಕಪ್‌ ಆರಂಭಕ್ಕೆ ಕೆಲವೇ ದಿನಗಳಿರುವಾಗ ಅವರ ನೇಮಕ ನಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.