ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ರಷ್ಯಾಕ್ಕಿಲ್ಲ ಅವಕಾಶ ವಾಷಿಂಗ್ಟನ್‌: ಈ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನ ಟ್ರ್ಯಾಕ್‌ ಮತ್ತು ಫೀಲ್ಡ್ ಅಥ್ಲೆಟಿಕ್ಸ್‌ ಸ್ಪರ್ಧೆಗಳಿಗೆ ರಷ್ಯಾದ ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿಲ್ಲ. ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ಈ ನಿರ್ಬಂಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿತ್ತು. ಆಗಿನಿಂದ ಹಲವು ಪ್ರಮುಖ ಸ್ಪರ್ಧೆಗಳಿಗೆ ರಷ್ಯಾ ಅಥ್ಲೀಟ್‌ಗಳಿಗೆ ಅವಕಾಶ ನಿರಾಕರಿಸಲಾಗಿದೆ. ವಿಶ್ವ ಚಾಂಪಿಯನ್‌ಷಿಪ್‌ ಇದೇ 15ರಿಂದ 24ರವರೆಗೆ ಅಮೆರಿಕದ ಯೂಜೀನ್‌ನಲ್ಲಿ ನಿಗದಿಯಾಗಿದೆ. ಇದೇ ವೇಳೆ ರಷ್ಯಾದ 18 ಸ್ಪರ್ಧಿಗಳಿಗೆ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ತಟಸ್ಥವಾಗಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆದರೆ ಇದುವಿಶ್ವಚಾಂಪಿಯನ್‌ಷಿಪ್‌ಗೆ ಅನ್ವಯಿಸುವುದಿಲ್ಲ. 2015ರಲ್ಲಿ ರಷ್ಯಾದಲ್ಲಿ ನಡೆದಿದ್ದ ಉದ್ದೀಪನ ಮದ್ದು ಸೇವನೆ ಹಗರಣದಿಂದ ಮುಕ್ತರಾದ ಅಥ್ಲೀಟ್‌ಗಳು ಇವರು. ಕಳೆದ ವರ್ಷದ ಒಲಿಂಪಿಕ್ಸ್‌ನಲ್ಲಿ ರಷ್ಯಾದ 10 ಮತ್ತು 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 29 ಅಥ್ಲೀಟ್‌ಗಳ ಸ್ಪರ್ಧೆಗೆ ಅವಕಾಶ ನೀಡಲಾಗಿತ್ತು. ಈಗ ರಷ್ಯಾದ ಒಟ್ಟು 73 ಅಥ್ಲೀಟ್‌ಗಳು ಅಂತತರಾಷ್ಟ್ರೀಯ ಸ್ಪರ್ಧೆಗಳಲ್ಲಿ ತಟಸ್ಥರಾಗಿ ಭಾಗವಹಿಸುತ್ತಿದ್ದಾರೆ. ಇವರಲ್ಲಿ ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ ಹೈಜಂಪ್‌ ಪಟು ಮರಿಯಾ ಲಸಿತ್ಕೇನ್ ಒಬ್ಬರು. ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅವರು ಒಮ್ಮೆಯೂ ಸೋಲು ಕಂಡಿಲ್ಲ. ರಷ್ಯಾ ಅಥ್ಲೀಟ್‌ಗಳ ನಿಷೇಧಕ್ಕೆ ಶಿಫಾರಸು ಮಾಡಿದ್ದ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್‌ ಬಾಕ್‌ ವಿರುದ್ಧ ಮರಿಯಾ ಕಳೆದ ತಿಂಗಳು ಕಿಡಿ ಕಾರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.