ಗತವೈಭವ ಮರಳಿ ತರುವ ಪ್ರಯತ್ನ ಬೆಂಗಳೂರು: ಒಂದೂವರೆ ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ‘ಮಹಾರಾಜಾಸ್ ಗೋಲ್ಡ್‌ ಕಪ್‌’ (ಗ್ರೇಡ್‌–2) ಭಾನುವಾರ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ನಡೆಯಲಿದ್ದು, ರೇಸ್‌ ಪ್ರಿಯರ ಕುತೂಹಲ ಗರಿಗೆದರಿದೆ. ಬೆಂಗಳೂರು ಟರ್ಫ್ ಕ್ಲಬ್‌ (ಬಿಟಿಸಿ) ಆಯೋಜಿಸಿರುವ ಈ ರೇಸ್‌ಗೆ ಜವಾರೆ ಎಸ್‌.ಪೂನಾವಾಲಾ ಅವರು ಸಹಪ್ರಾಯೋಜಕತ್ವ ವಹಿಸಿದ್ದಾರೆ. 2,200 ಮೀ. ದೂರದ ಈ ಗ್ರೇಡ್‌–2 ರೇಸ್‌ಅನ್ನು4 ವರ್ಷಕ್ಕಿಂತ ಮೇಲಿನ ಕುದುರೆಗಳಿಗೆ ಆಯೋಜಿಸಲಾಗಿದೆ. ಈ ಹಿಂದೆ ವಿವಿಧ ರೇಸ್‌ಗಳಲ್ಲಿ ಗೆದ್ದಿರುವ ಮತ್ತು ಗಮನಾರ್ಹ ಪ್ರದರ್ಶನ ನೀಡಿರುವ ಎಂಟು ಕುದುರೆಗಳು ಪಾಲ್ಗೊಳ್ಳುತ್ತಿವೆ. ಥಿಯಾನ್, ಜುಕರೆಲಿ, ಮೈ ಒಪೀನಿಯನ್‌, ಫಾರೆಸ್ಟ್‌ ಫ್ಲೇಮ್, ಎ ಸ್ಟಾರ್‌ ಈಸ್‌ ಬಾರ್ನ್, ಫೈತ್‌ ಆಫ್‌ ಸಕ್ಸಸ್‌, ಜೈಂಟ್‌ ಸ್ಟಾರ್‌ ಮತ್ತು ಟ್ರೂಲಿ ಎಪಿಕ್‌ ಕುದುರೆಗಳು ಕಣಕ್ಕಿಳಿಯಲಿದ್ದು, ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ. ಅತ್ಯಂತ ಹಳೆಯ ರೇಸ್‌: ‘ಮೈಸೂರು ರಾಜವಂಶಸ್ಥರು ಆರಂಭಿಸಿರುವ ಮಹಾರಾಜಾಸ್‌ ಕಪ್‌ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಭಾರತದಲ್ಲಿ ಆಯೋಜಿಸಲಾಗುವ ಅತ್ಯಂತ ಹಳೆಯ ರೇಸ್‌ ಇದಾಗಿದೆ. ಬಿಟಿಸಿಯು ಈ ರೇಸ್‌ನ ಗತವೈಭವವನ್ನು ಮರಳಿ ತರುವ ಕೆಲಸ ಮಾಡುತ್ತಿದೆ’ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಟಿಸಿ ಅಧ್ಯಕ್ಷ ಕೆ.ಉದಯ್‌ ಈಶ್ವರನ್‌ ತಿಳಿಸಿದರು. ‘ಮೈಸೂರು ಮಹಾರಾಜರು 1868 ರಲ್ಲಿ ಅಗರಂ ಮೈದಾನದಲ್ಲಿ ಮೊದಲ ಬಾರಿಗೆ ಈ ರೇಸ್‌ ಆಯೋಜಿಸಿದ್ದರು ಎಂಬುದು ಇತಿಹಾಸದ ದಾಖಲೆಗಳಿಂದ ತಿಳಿದುಬರುತ್ತದೆ. ಗೆದ್ದ ಕುದುರೆ ₹ 2 ಸಾವಿರ ಸಂಪಾದಿಸಿತ್ತು. ಆಗಿನ ಕಾಲಕ್ಕೆ ಅದು ಬಹಳ ದೊಡ್ಡ ಮೊತ್ತ ಆಗಿತ್ತು’ ಎಂದು ಅವರು ಹೇಳಿದರು. ‘ರಾಜರ ಆಡಳಿತ ಕೊನೆಗೊಂಡ ಬಳಿಕದ ವರ್ಷಗಳಲ್ಲಿ ಈ ರೇಸ್‌ ತನ್ನ ವೈಭವ ಕಳೆದುಕೊಂಡಿತು. ಇತ್ತೀಚಿನ ವರ್ಷಗಳಲ್ಲಿ ಬಂದಂತಹ ಡರ್ಬಿ ರೇಸ್‌ಗಳು ಹೆಚ್ಚಿನ ಬಹುಮಾನ ಮೊತ್ತ ನೀಡುತ್ತಿರುವುದರಿಂದ, ಪ್ರಮುಖ ಕುದುರೆಗಳು ಮಹಾರಾಜಾಸ್‌ ಕಪ್‌ನಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಆದ್ದರಿಂದ ಈ ಬಾರಿ ಬಹುಮಾನ ಮೊತ್ತವನ್ನು ₹ 50 ಲಕ್ಷಕ್ಕೆ ಹೆಚ್ಚಿಸಿದ್ದೇವೆ. ಜವಾರೆ ಎಸ್‌.ಪೂನಾವಾಲಾ ಅವರು ಪ್ರಾಯೋಜಕತ್ವ ವಹಿಸಿರುವುದು ಸಂತಸದ ವಿಷಯ’ ಎಂದರು. ಮಹಾರಾಜಾಸ್‌ ಕಪ್‌ ಟ್ರೋಫಿಯನ್ನು ಇದೇ ವೇಳೆ ಅನಾವರಣಗೊಳಿಸಲಾಗಿತ್ತು. ಬಿಟಿಸಿ ಸ್ಟೀವರ್ಡ್ಸ್‌ಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡರು. ₹ 50 ಲಕ್ಷ ಬಹುಮಾನ ಮೊತ್ತ ಈ ಪ್ರಮುಖ ರೇಸ್‌ ಒಟ್ಟು ₹ 50 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ. ರೇಸ್‌ ಗೆಲ್ಲುವ ಕುದುರೆಯು ₹ 1 ಲಕ್ಷ ಮೌಲ್ಯದ ಟ್ರೋಫಿ ಹಾಗೂ ₹ 30 ಲಕ್ಷ ಸಂಪಾದಿಸಲಿದೆ. ಇದರಲ್ಲಿ ಮಾಲೀಕನಿಗೆ ₹ 24.75 ಲಕ್ಷ, ಟ್ರೇನರ್‌ಗೆ ₹ 3 ಲಕ್ಷ ಹಾಗೂ ಜಾಕಿಗೆ ₹ 2.25 ಲಕ್ಷ ದೊರೆಯಲಿದೆ. ಎರಡನೇ ಸ್ಥಾನ ಪಡೆಯುವ ಕುದುರೆಗೆ ₹ 10 ಲಕ್ಷ ದೊರೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.