ಕಾಮನ್‌ವೆಲ್ತ್‌ ಕ್ರೀಡಾಕೂಟ: ಬಜರಂಗ್‌ ಪೂನಿಯಾ ಅಮೆರಿಕದಲ್ಲಿ ತರಬೇತಿ ನವದೆಹಲಿ: ಭಾರತದ ಕುಸ್ತಿಪಟು ಬಜರಂಗ್‌ ಪೂನಿಯಾ ಅವರು ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಪೂರ್ವಭಾವಿಯಾಗಿ ಅಮೆರಿಕದಲ್ಲಿ ತರಬೇತಿ ಪಡೆಯಲಿದ್ದಾರೆ. ‘ಬಜರಂಗ್‌ ಅವರಿಗೆ ಯುಕೆ ವೀಸಾ ದೊರೆತಿದೆ. ಆದ್ದರಿಂದ ತರಬೇತಿಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅಮೆರಿಕದಿಂದ ನೇರವಾಗಿ ಇಂಗ್ಲೆಂಡ್‌ಗೆ ತೆರಳಬೇಕಿತ್ತು. ಅಮೆರಿಕದಲ್ಲಿದ್ದುಕೊಂಡು ಯುಕೆ ವೀಸಾದ ಪ್ರಕ್ರಿಯೆ ಪೂರ್ಣಗೊಳಿಸುವುದು ಕಷ್ಟವಾಗಿತ್ತು. ಇದೀಗ ಯುಕೆ ವೀಸಾ ದೊರೆತಿರುವುದರಿಂದ ಯಾವುದೇ ಆತಂಕವಿಲ್ಲದೆಯೇ ಅಮೆರಿಕಕ್ಕೆ ಪ್ರಯಾಣಿಸಲಿದ್ದಾರೆ’ ಎಂದು ಭಾರತ ಕ್ರೀಡಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. 28 ವರ್ಷದ ಬಜರಂಗ್‌ ಅವರು ಅಮೆರಿಕದ ಮಿಷಿಗನ್‌ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯಲು ಕಳೆದ ತಿಂಗಳಲ್ಲೇ ತೆರಳಬೇಕಿತ್ತು. ಆದರೆ ಯುಕೆ ವೀಸಾ ದೊರೆಯುವುದು ತಡವಾದ್ದರಿಂದ ಪ್ರಯಾಣ ಮುಂದೂಡಿದ್ದರು. ಬಜರಂಗ್‌ ಮತ್ತು ದೀಪಕ್‌ ಪೂನಿಯಾ ಅವರು ಈ ಇನ್ನೆರಡು ದಿನಗಳಲ್ಲಿ ಅಮೆರಿಕಕ್ಕೆ ತೆರಳಲಿದ್ದು, ಜುಲೈ 30ರ ವರೆಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಳ್ಳಲು ಬರ್ಮಿಂಗ್‌ಹ್ಯಾಂಗೆ ಪ್ರಯಾಣಿಸಲಿದ್ದಾರೆ. ಬಜರಂಗ್‌ 2018ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.