ಬಾಕ್ಸಿಂಗ್: ಗೀತಿಕಾ, ಆಫಿಯಾಗೆ ಚಿನ್ನ ನವದೆಹಲಿ (ಪಿಟಿಐ): ವಿಶ್ವ ಯೂತ್‌ ಚಾಂಪಿಯನ್ ಆಫಿಯಾ ಪಠಾಣ್‌ ಮತ್ತು ಗೀತಿಕಾ ಅವರು ಕಜಕಸ್ತಾನದ ನೂರ್‌ ಸುಲ್ತಾನ್‌ನಲ್ಲಿ ನಡೆದ ಚೊಚ್ಚಲ ಎಲೊರ್ಡ ಬಾಕ್ಸಿಂಗ್‌ ಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. ಕೊನೆಯ ದಿನವಾದ ಸೋಮವಾರ ನಡೆದ ಸ್ಪರ್ಧೆಯಲ್ಲಿ ಕಲೈವನಿ ಶ್ರೀನಿವಾಸನ್‌ ಮತ್ತು ಜಮುನಾ ಬೋರೊ ಅವರು ಬೆಳ್ಳಿ ಜಯಿಸಿದರು. ಭಾರತ ಒಟ್ಟು 14 ಪದಕಗಳೊಂದಿಗೆ ತನ್ನ ಅಭಿಯಾನ ಕೊನೆಗೊಳಿಸಿತು. ತಲಾ ಎರಡು ಚಿನ್ನ ಮತ್ತು ಬೆಳ್ಳಿಯ ಜತೆ 10 ಕಂಚಿನ ಪದಕಗಳನ್ನು ಜಯಿಸಿತು. ಮಹಿಳೆಯರ 81 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಆಫಿಯಾ 5–0 ರಲ್ಲಿ ಲಜ್ಜತ್‌ ಕಂಗಿಬಯೆವಾ ಅವರನ್ನು ಮಣಿಸಿದರು. 48 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ ಗೀತಿಕಾ 4–1 ರಲ್ಲಿ ಭಾರತದವರೇ ಆದ ಕಲೈವನಿ ವಿರುದ್ಧ ಗೆದ್ದರು. 2019ರ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತೆ ಜಮುನಾ ಅವರು 54 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 0–5 ರಲ್ಲಿ ಉಜ್ಬೆಕಿಸ್ತಾನದ ನಿಗಿನಾ ಉಕ್ತಕೊವಾ ಕೈಯಲ್ಲಿ ಪರಾಭವಗೊಂಡರು. ಭಾರತ ಮತ್ತು ಆತಿಥೇಯ ಕಜಕಸ್ತಾನ ಅಲ್ಲದೆ ಉಜ್ಬೆಕಿಸ್ತಾನ, ಕ್ಯೂಬಾ, ಚೀನಾ ಮತ್ತು ಮಂಗೋಲಿಯ ದೇಶಗಳ ಸ್ಪರ್ಧಿಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.