ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌: ಹಷಿಕಾ ಕೂಟ ದಾಖಲೆ ಬೆಂಗಳೂರು: ಉತ್ತಮ ಪ್ರದರ್ಶನ ಮುಂದುರಿಸಿದ ಕರ್ನಾಟಕದ ಹಷಿಕಾ ರಾಮಚಂದ್ರ ಅವರು ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಮತ್ತೆ ಎರಡು ಕೂಟ ದಾಖಲೆಗಳನ್ನು ಸ್ಥಾಪಿಸಿದರು. ಎರಡನೇ ದಿನವಾದ ಭಾನುವಾರ ನಡೆದ 12ರಿಂದ 14 ವರ್ಷದೊಳಗಿನ ಬಾಲಕಿಯರ 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಹಷಿಕಾ 4 ನಿ. 29.25 ಸೆ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಆನ್ಯಾ ವಾಲಾ (4:31.99) ಹೆಸರಲ್ಲಿದ್ದ ದಾಖಲೆಯನ್ನು ಅವರು ಮುರಿದರು. ಕರ್ನಾಟಕದವರೇ ಆದ ಎಸ್‌.ರುಜುಲಾ ಬೆಳ್ಳಿ ಗೆದ್ದರೆ, ತೆಲಂಗಾಣದ ಶ್ರೀನಿತ್ಯ ಸಾಗಿ ಮೂರನೇ ಸ್ಥಾನ ಗಳಿಸಿದರು. ಆ ಬಳಿಕ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಕಣಕ್ಕಿಳಿದ ಹಷಿಕಾ, ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಅವರು 2 ನಿಮಿಷ 23.20 ಸೆ.ಗಳಲ್ಲಿ ಗುರಿ ತಲುಪಿದರು. ಮಹಾರಾಷ್ಟ್ರದ ಅಪೇಕ್ಷಾ ಫೆರ್ನಾಂಡಿಸ್ (2:23.67 ಸೆ.) ಅವರು 2019 ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು. ಹಷಿಕಾ ಕೂಟದ ಮೊದಲ ದಿನ 200 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಕೂಟ ದಾಖಲೆ ಮಾಡಿದ್ದರು. ಕರ್ನಾಟಕದ ನೀನಾ ವೆಂಟಕೇಶ್‌ ಅವರು 50 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಫಲಿತಾಂಶ: ಬಾಲಕಿಯರ ವಿಭಾಗ (12 ರಿಂದ 14 ವರ್ಷ): 400 ಮೀ. ಫ್ರೀಸ್ಟೈಲ್: ಹಷಿಕಾ ರಾಮಚಂದ್ರ (ಕರ್ನಾಟಕ)–1 ಕಾಲ: 4 ನಿ.29.25 ಸೆ., ಎಸ್.ರುಜುಲಾ (ಕರ್ನಾಟಕ)–2, ಶ್ರೀನಿತ್ಯಾ ಸಾಗಿ (ತೆಲಂಗಾಣ)–3 200 ಮೀ.ಬಟರ್‌ಫ್ಲೈ: ಹಷಿಕಾ ರಾಮಚಂದ್ರ (ಕರ್ನಾಟಕ)–1 ಕಾಲ: 2ನಿ. 23.29 ಸೆ., ತನಿಷಿ ಗುಪ್ತಾ (ಕರ್ನಾಟಕ)–2, ಮೋಕ್ಷಿತಾ ಎ. (ತೆಲಂಗಾಣ)–3. 15–17 ವರ್ಷ: 50 ಮೀ.ಫ್ರೀಸ್ಟೈಲ್‌: ನೀನಾ ವೆಂಕಟೇಶ್ (ಕರ್ನಾಟಕ)–1 ಕಾಲ: 27.30 ಸೆ., ಜಸ್‌ನೂರ್‌ ಕೌರ್‌ (ಪಂಜಾಬ್)–2, ರಿಧಿಮಾ ವೀರೇಂದ್ರ ಕುಮಾರ್ (ಕರ್ನಾಟಕ)–3 ಬಾಲಕರ ವಿಭಾಗ 15 ರಿಂದ 17 ವರ್ಷ: 200 ಮೀ. ಬಟರ್‌ಫ್ಲೈ: ಉತ್ಕರ್ಷ್‌ ಸಂತೋಷ್‌ ಪಾಟೀಲ್ (ಕರ್ನಾಟಕ)–1, ಕಾಲ: 2 ನಿ. 04.60 ಸೆ., ಯುಗ್‌ ಚೆಲನಿ (ರಾಜಸ್ತಾನ)–2, ಅನ್ಶವ್‌ ಜಿಂದಾಲ್ (ಪಂಜಾಬ್)–3 12 ರಿಂದ 14 ವರ್ಷ: 50 ಮೀ. ಬ್ರೆಸ್ಟ್‌ಸ್ಟ್ರೋಕ್: ಆರ್‌.ನವನೀತ್ (ಕರ್ನಾಟಕ)–1, ಕಾಲ: 33.12 ಸೆ., ಎಂ.ಎಸ್‌.ನಿತೀಶ್‌ (ತಮಿಳುನಾಡು)–2, ಅಂಕಿತ್‌ ಯಾದವ್ (ಎಸ್‌ಎಸ್‌ಸಿಬಿ)–3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.