ಉತ್ತಮ ಸಾಮರ್ಥ್ಯವೇ ಗುರಿ: ನೀರಜ್ ಚೋಪ್ರಾ ಬೆಂಗಳೂರು: ಉತ್ತಮ ಸಾಮರ್ಥ್ಯ ತೋರುವತ್ತ ನನ್ನ ಚಿತ್ತ ಇರುತ್ತದೆ; ಸೋಲು ಗೆಲುವಿನ ಕುರಿತು ಲೆಕ್ಕಹಾಕುವುದಿಲ್ಲ‌ ಎಂದು ಭಾರತದ ಜಾವೆಲಿನ್ ಥ್ರೊ ಅಥ್ಲೀಟ್‌ ನೀರಜ್ ಚೋಪ್ರಾ ಹೇಳಿದ್ದಾರೆ. ಉಡುಪು ತಯಾರಿಕಾ ಕಂಪನಿ ಅಂಡರ್‌ ಆರ್ಮರ್‌ ಸೋಮವಾರ ವರ್ಚುವಲ್ ಆಗಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್‌, ಸದ್ಯ ವಿಶ್ವ ಚಾಂಪಿಯನ್‌ಷಿಪ್‌ ಸ್ಪರ್ಧೆಗಾಗಿ ಅಮೆರಿಕದ ಯೂಜೀನ್‌ನಲ್ಲಿದ್ದಾರೆ. ಅಂಡರ್‌ ಆರ್ಮರ್ ಕಂಪನಿ ಅವರಿಗೆ ಪ್ರಾಯೋಜಕತ್ವ ನೀಡುತ್ತಿದೆ. ‘ತರಬೇತಿ ಮತ್ತು ಸ್ಪರ್ಧೆಗೆ ತುಂಬಾ ವ್ಯತ್ಯಾಸವಿರುತ್ತದೆ. ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಕೂಗು, ಶಿಳ್ಳೆ, ಚಪ್ಪಾಳೆಗಳ ಸದ್ದು ಒತ್ತಡ ಹೆಚ್ಚಿಸುತ್ತದೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಜಾವೆಲಿನ್ ಎಸೆಯುವ ದೂರದ ಕುರಿತು ಆಲೋಚಿಸಿಲ್ಲ‘ ಎಂದು ನೀರಜ್ ನುಡಿದರು. ‘ಬಾಲ್ಯದಲ್ಲಿ ವಾಲಿಬಾಲ್ ನನ್ನ ಆಸಕ್ತಿಯ ಕ್ರೀಡೆಯಾಗಿತ್ತು. ಆದರೆ ವೃತ್ತಿಪರವಾಗಿ ತೆಗೆದುಕೊಂಡಿದ್ದು ಜಾವೆಲಿನ್ ಮಾತ್ರ. ನಮ್ಮದು ಅವಿಭಕ್ತ ಕುಟುಂಬ. ಕ್ರೀಡೆಯ ಕುರಿತು ಆಸಕ್ತಿ ಹೆಚ್ಚಲು ನನ್ನ ಚಿಕ್ಕಪ್ಪ ಕಾರಣ. ಈಗ ಡಯಟ್‌ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ನಾನು ಹೆಚ್ಚು ಇಷ್ಟಪಡುವ ಸಿಹಿ ಪದಾರ್ಥವನ್ನು ಕಡಿಮೆ ಸೇವಿಸಬೇಕಾಗಿದೆ‘ ಎಂದು ನೀರಜ್‌ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.