ವಿಶ್ವಕಪ್ ಶೂಟಿಂಗ್: ಫೈನಲ್‌ಗೆ ಐಶ್ವರಿ, ಚೈನ್ ಸಿಂಗ್ ನವದೆಹಲಿ (ಪಿಟಿಐ): ಯುವಪ್ರತಿಭೆ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ದಕ್ಷಿಣ ಕೊರಿಯಾದ ಚಾಂಗ್‌ವಾನ್ ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್ ಕ್ವಾಲಿಫೈಯರ್‌ನಲ್ಲಿ ಅಗ್ರಸ್ಥಾನ ಗಳಿಸಿದರು. ಶುಕ್ರವಾರ ನಡೆದ ಪುರುಷರ 50 ಮೀಟರ್ಸ್ ರೈಫಲ್ ತ್ರಿ ಪೊಸಿಷನ್ಸ್ (3ಪಿ) ವಿಭಾಗದಲ್ಲಿ ಅವರು ಮೊದಲಿಗರಾಗಿದ್ದಾರೆ. ತೋಮರ್ ಮತ್ತು ಚೈನ್ ಸಿಂಗ್ ಅವರು ಫೈನಲ್‌ಗೆ ತಲುಪಿದ್ದು ಪದಕ ಗೆಲುವಿನ ಭರವಸೆ ಮೂಡಿಸಿದ್ದಾರೆ. ತೋಮರ್ 600ರ ಪೈಕಿ 593 ಅಂಕಗಳನ್ನು ಗಳಿಸಿ ಮೊದಲಿಗರಾದರು. ನೀಲಿಂಗ್ ಮತ್ತು ಪ್ರೊನ್ ಪೊಸಿಷನ್‌ಗಳಲ್ಲಿ ಅವರು ಕರಾರುವಾಕ್ ಆಗಿ ಗುರಿ ಸಾಧಿಸಿದರು. ಇದೇ ವಿಭಾಗದಲ್ಲಿ ಭಾರತೀಯ ಸೇನೆಯ ಯೋಧ ಚೈನ್ ಸಿಂಗ್ ಏಳನೇ ಸ್ಥಾನ ಪಡೆದರು. 586 ಅಂಕಗಳನ್ನು ಗಳಿಸಿದರು. ಅನುಭವಿ ಸಂಜೀವ್ ರಜಪೂತ್ 577 ಅಂಕ ಗಳಿಸಿ 40ನೇ ಸ್ಥಾನ ಪಡೆದರು. ಮಹಿಳೆಯರ 25 ಮೀಟರ್ಸ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಮನು ಭಾಕರ್ 288 ಅಂಕಗಳನ್ನು ಗಳಿಸಿದರು. ಏಳನೇ ಸ್ಥಾನ ಪಡೆದ ಅವರು, ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಕಣಕ್ಕಿಳಿಯುವರು. ಮಾಜಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಅನಾ ಕೊರಾಕಕಿ 295 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದರು. ಇದೇ ವಿಭಾಗದಲ್ಲಿ ರಿದಮ್ ಸಂಗ್ವಾನ್ 285 ಅಂಕ ಪಡೆದು 18ನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.