ನಿಯಮ ತಿದ್ದುಪಡಿ: ಕೆಬಿಎ ಚಿಂತನೆ ಬೆಂಗಳೂರು: ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ (ಬಿಎಐ) ಮಾನ್ಯತೆಯನ್ನು ಮರಳಿ ಪಡೆಯುವ ಪ್ರಯತ್ನ ಆರಂಭಿಸಿರುವ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ), ನಿಯಮಗಳಿಗೆ ತಿದ್ದುಪಡಿ ತರುವ ಚಿಂತನೆ ಮಾಡಿದೆ. ನಿಯಮಗಳ ತಿದ್ದುಪಡಿಗೆ ನೀಡಿದ್ದ ಗಡುವು ಮೀರಿದ ಕಾರಣ ಬಿಎಐ, ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯ ಮಾನ್ಯತೆಯನ್ನು ರದ್ದುಗೊಳಿಸಿತ್ತು. ಮಾನ್ಯತೆ ಮರಳಿ ಪಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಶುಕ್ರವಾರ ಕಾರ್ಯಕಾರಿ ಸಮಿತಿಯ ತುರ್ತು ಸಭೆಆಯೋಜಿಸಲಾಗಿತ್ತು. ಬಿಕ್ಕಟ್ಟು ಬಗೆಹರಿಸಲು ತಮ್ಮ ಮುಂದಿರುವ ಆಯ್ಕೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಸಮಿತಿಯ 19 ಸದಸ್ಯರಲ್ಲಿ 15 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ‘ನಿಯಮಗಳಲ್ಲಿ ತಿದ್ದುಪಡಿ ಮಾಡುವಂತೆ ಬಿಎಐ ಸೂಚಿಸಿದೆ. ಅಂತಹ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದೇವೆ. ಅದರ ಜತೆಯಲ್ಲಿ ಕಾನೂನು ಹೋರಾಟಕ್ಕಿಳಿಯುವ ಆಯ್ಕೆಯನ್ನೂ ಮುಕ್ತವಾಗಿಡಲಾಗಿದೆ. ವಕೀಲರ ಸಲಹೆ ಪಡೆದು ಮುಂದಿನ ಹೆಜ್ಜೆಯಿಡಲಾಗುವುದು’ ಎಂದು ಕೆಬಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಎಲ್ಲ ಜಿಲ್ಲೆಗಳ ಪ್ರತಿನಿಧಿಗಳ ಜತೆ ಚರ್ಚಿಸಿದ್ದೇವೆ. ಬಿಎಐ ನಿಯಮಗಳು ಮತ್ತು ರಾಜ್ಯದ ಆಟಗಾರರು, ನಮ್ಮ ಸದಸ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿಯಮಗಳಿಗೆ ತಿದ್ದುಪಡಿ ತರಬೇಕೆಂಬ ಸಲಹೆಗಳು ಬಂದವು’ ಎಂದು ಹೇಳಿದರು. 19 ಸದಸ್ಯರನ್ನೊಳಗೊಂಡ ಕೆಬಿಎ ಕಾರ್ಯಕಾರಿ ಸಮಿತಿಯಲ್ಲಿ ಈಗ ಜಿಲ್ಲೆಗಳನ್ನು ಪ್ರತಿನಿಧಿಸುವ 9 ಮಂದಿ ಮತ್ತು 10 ಆಜೀವ ಸದಸ್ಯರು ಇದ್ದಾರೆ. ಇದಕ್ಕೆ ಅಸಮಾಧಾನ ಸೂಚಿಸಿರುವ ಬಿಎಐ, ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಸೂಚಿಸಿತ್ತು. ಯಾರ ವಿರುದ್ಧವೂ ಇಲ್ಲ: ‘ನಾವು ಯಾರ ವಿರುದ್ಧವೂ ಇಲ್ಲ. ಈಗ ತಲೆದೋರಿರುವ ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯಬೇಕು ಎಂಬುದೇ ಬಯಕೆ. ಜಿಲ್ಲಾ ಸಂಸ್ಥೆಗಳಿಗೆ ಪ್ರಾತಿನಿಧ್ಯ ನೀಡುವುದರ ಜತೆಯಲ್ಲೇ ರಾಜ್ಯದಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಯನ್ನು ಪೋಷಿಸುವ ನಮ್ಮ ಸದಸ್ಯರ ಹಿತಾಸಕ್ತಿ ಕಾಪಾಡಬೇಕಿದೆ’ ಎಂದು ಕೆಬಿಎ ಅಧ್ಯಕ್ಷ ಮನೋಜ್‌ಕುಮಾರ್‌ ಜಿ.ಎಚ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.