ಗಾಲ್ಫ್‌: ಪ್ರಣವಿ ಚಾಂಪಿಯನ್‌ ಬೆಂಗಳೂರು: ಉತ್ತಮ ಪ್ರದರ್ಶನ ಮುಂದುವರಿಸಿದ ಪ್ರಣವಿ ಅರಸ್‌ ಅವರು ಶುಕ್ರವಾರ ಇಲ್ಲಿ ಕೊನೆಗೊಂಡ ಮಹಿಳಾ ಹೀರೊ ಪ‍್ರೊ ಗಾಲ್ಫ್ ಟೂರ್‌ನ ಒಂಬತ್ತನೇ ಲೆಗ್ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಮೈಸೂರಿನ ಯುವ ಗಾಲ್ಫರ್ ಈ ಋತುವಿನಲ್ಲಿ ಪಡೆದ ನಾಲ್ಕನೇ ಪ್ರಶಸ್ತಿ ಇದಾಗಿದೆ. ಈ ಗೆಲುವಿನ ಮೂಲಕ ‘ಆರ್ಡ್‌ ಆಫ್‌ ಮೆರಿಟ್‌’ನಲ್ಲಿ ಅವರು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೆಂಗಳೂರು ಗಾಲ್ಫ್‌ ಕೋರ್ಸ್‌ನಲ್ಲಿ ಶುಕ್ರವಾರವೂ ನಿಖರ ಪ್ರದರ್ಶನ ಮುಂದುವರಿಸಿದ ಪ್ರಣವಿ 71 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಮೂರು ಸುತ್ತುಗಳಲ್ಲಿ ಒಟ್ಟಾರೆ 209 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. ‍ಪ್ರಣವಿ ಅವರಿಗೆ ಪ್ರಬಲ ಪೈಪೋಟಿ ನೀಡಿದ ದೆಹಲಿಯ ಸೆಹೆರ್‌ ಅತ್ವಾಲ್ (212) ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಹಿತಾಶ್ರೀ ಬಕ್ಷಿ (215) ಮೂರನೇ ಸ್ಥಾನ ಪಡೆದುಕೊಂಡರೆ, ವೃತ್ತಿಪರ ಆಟಗಾರ್ತಿಯಾಗಿ ಬದಲಾದ ಬಳಿಕ ಇದೇ ಮೊದಲ ಟೂರ್ನಿಯಲ್ಲಿ ಆಡಿದ ಸ್ನೇಹಾ ಸಿಂಗ್ (216) ನಾಲ್ಕನೇ ಸ್ಥಾನ ಗಳಿಸಿದರು. ಒವಿಯಾ ರೆಡ್ಡಿ, ಗೌರಿಕಾ ಬಿಷ್ಣೊಯ್‌ ಜಂಟಿ ಐದನೇ ಸ್ಥಾನ, ಅಫ್ಶಾನ್‌ ಫಾತಿಮಾ ಹಾಗೂ ನಯನಿಕಾ ಸಂಗಾ ಜಂಟಿ ಏಳನೇ ಸ್ಥಾನ ತಮ್ಮದಾಗಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.