ಸಿಂಗಪುರ ಓಪನ್ ಪ್ರಶಸ್ತಿ ಸುತ್ತಿಗೆ ಸಿಂಧು ಲಗ್ಗೆ ಸಿಂಗಪುರ (ಪಿಟಿಐ): ಗೆಲುವಿನ ಓಟ ಮುಂದುವರಿಸಿದ ಭಾರತದ ಪಿ.ವಿ.ಸಿಂಧು ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಶನಿವಾರ ಇಲ್ಲಿ ನಡೆದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಸಿಂಧು21-15, 21-7ರಿಂದ ಜಪಾನ್‌ನ ಸಿನಾ ಕವಾಕಮಿ ಅವರನ್ನು ಮಣಿಸಿದರು. 32 ನಿಮಿಷಗಳ ಈ ಪಂದ್ಯ ದಲ್ಲಿ ಭಾರತದ ಆಟಗಾರ್ತಿ ಸಂಪೂರ್ಣ ಪಾರಮ್ಯ ಮೆರೆದರು. ಈ ವರ್ಷ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿರುವ ಸಿಂಧು, ಈ ಋತುವಿನಲ್ಲಿ ಮೊದಲ ಸೂಪರ್ 500 ಟೂರ್ನಿಯ ಟ್ರೋಫಿ ಗೆಲುವಿಗೆ ಇನ್ನೊಂದೇ ಹೆಜ್ಜೆ ದೂರದಲ್ಲಿದ್ದಾರೆ. ಸಿಂಧು ಅವರು ಫೈನಲ್‌ನಲ್ಲಿ ಚೀನಾದ ವಾಂಗ್‌ ಜಿ ಯಿ ಅವರನ್ನು ಎದುರಿ ಸುವರು. ವಾಂಗ್‌ ಅವರು ಏಷ್ಯನ್ ಚಾಂಪಿಯನ್‌ಷಿಪ್ ಚಿನ್ನದ ಪದಕ ವಿಜೇತೆ. ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಅವರು21-14, 21-14ರಿಂದ ಒಹೊರಿ ಆಯಾ ಅವರನ್ನು ಮಣಿಸಿದರು.ಸಿಂಧು ಈ ವರ್ಷದ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ವಾಂಗ್ ಎದುರು ಗೆದ್ದಿದ್ದರು. ಫೈನಲ್ ಪಂದ್ಯ ಆರಂಭ: ಬೆಳಿಗ್ಗೆ 10.30 (ಭಾರತೀಯ ಕಾಲಮಾನ) ನೇರಪ್ರಸಾರ: ಸ್ಪೋರ್ಟ್ಸ್ 18 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.