ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಡಬಲ್ಸ್ ಕ್ವಾರ್ಟರ್‌ಫೈನಲ್‌ಗೆ ತನಿಶಾ ತೈಪೆ: ಭಾರತದ ತನಿಶಾ ಕ್ರಾಸ್ತೊ ಅವರು ಇಲ್ಲಿ ನಡೆಯುತ್ತಿರುವ ತೈಪೆ ಓಪನ್ ಸೂಪರ್‌ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳಾ ಮತ್ತು ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಗುರುವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ತನಿಶಾ ಮತ್ತು ಇಶಾನ್‌ ಭಟ್ನಾಗರ್ ಜೋಡಿ21-14, 21-17ರಿಂದ ಚೀನಾ ತೈಪೆಯ ಚೆಂಗ್‌ ಕಾಯ್ ವೆನ್‌ ಮತ್ತು ವಾಂಗ್‌ ಯಿ ಕಿಯಾವೊ ಎದುರು ಜಯಿಸಿದರು. ಮಹಿಳಾ ಡಬಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಶೃತಿ ಮಿಶ್ರಾ ಜೊತೆಗೂಡಿದ ತನಿಶಾ21-14, 21-8ರಿಂದ ಸ್ಥಳೀಯ ಆಟಗಾರ್ತಿಯರಾದ ಜಿಯಾ ಯಿನ್‌ ಲಿನ್ ಮತ್ತು ಲಿನ್‌ ಯು ಹಾವೊ ಎದುರು ಗೆದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಪರುಪಳ್ಳಿ ಕಶ್ಯಪ್ ಕೂಡ ಎಂಟರಘಟ್ಟ ತಲುಪಿದರು. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಅವರು21-10, 21-19ರಿಂದ ಚೀನಾ ತೈಪೆಯ ಚಿಯಾ ಹಾವೊ ಲೀ ಅವರನ್ನು ಪರಾಭವಗೊಳಿಸಿದರು. ಮಿಥುನ್‌ ಮಂಜುನಾಥ್, ಕಿರಣ್ ಜಾರ್ಜ್‌ಮತ್ತು ಪ್ರಿಯಾಂಶು ರಾಜಾವತ್‌ ಎರಡನೇ ಸುತ್ತಿನ ತಡೆ ದಾಟುವಲ್ಲಿ ವಿಫಲರಾದರು. ಮಿಥುನ್‌24-22, 5-21, 17-21ರಿಂದ ಜಪಾನ್‌ನ ಕೊಡಾಯಿ ನರವೊಕಾ ಎದುರು, ಕಿರಣ್‌21-23, 21-16, 7-21ರಿಂದ ತೈವಾನ್‌ನ ಚೊ ಟಿಯೆನ್ ಚೆನ್ ವಿರುದ್ಧ, ಪ್ರಿಯಾಂಶು19-21 13-21ರಿಂದ ಚೀನಾ ತೈಪೆಯ ಚೆನ್‌ ಚಿ ಟಿಂಗ್ ಎದುರು ನಿರಾಸೆ ಅನುಭವಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಸಮಿಯಾ ಇಮದ್ ಫಾರೂಕಿ, ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌– ಧೃವ ಕಪಿಲ, ಇಶಾನ್ ಭಟ್ನಾಗರ್ ಮತ್ತು ಸಾಯಿ ಪ್ರತೀಕ್‌ ಕೂಡ ಸೋಲು ಅನುಭವಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.