ಗಾಲ್ಫ್‌: ಸೆಹೆರ್‌ ಚಾಂಪಿಯನ್‌ ಬೆಂಗಳೂರು: ಅಂತಿಮ ಹಂತದಲ್ಲಿ ಎದುರಾದ ಒತ್ತಡವನ್ನು ಸಮರ್ಥವಾಗಿ ಮೆಟ್ಟಿನಿಂತ ಸೆಹೆರ್‌ ಅತ್ವಾಲ್‌ ಇಲ್ಲಿ ಕೊನೆಗೊಂಡ ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ನ 10ನೇ ಲೆಗ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಪ್ರೆಸ್ಟೀಜ್‌ ಗಾಲ್ಫ್‌ಶೈರ್‌ ಕೋರ್ಸ್‌ನಲ್ಲಿ ಶುಕ್ರವಾರ ಅಂತಿಮ ಸುತ್ತಿನಲ್ಲಿ ಸೆಹೆರ್‌, ಸ್ನೇಹಾ ಸಿಂಗ್‌, ನೇಹಾ ತ್ರಿಪಾಠಿ ಮತ್ತು ನಯನಿಕಾ ಸಂಗಾ ನಡುವೆ ತುರುಸಿನ ಪೈಪೋಟಿ ಕಂಡುಬಂತು. ಅಂತಿಮವಾಗಿ ಸೆಹೆರ್‌ (212) ಗೆಲುವಿನ ನಗು ಬೀರಿದರು. ದೆಹಲಿಯ ಗಾಲ್ಫರ್‌ಗೆ ಈ ಋತುವಿನಲ್ಲಿ ದೊರೆತ ಮೊದಲ ಪ್ರಶಸ್ತಿ ಇದು. ನೇಹಾ ಮತ್ತು ನಯನಿಕಾ (211) ಜಂಟಿ ಎರಡನೇ ಸ್ಥಾನ ಪಡೆದುಕೊಂಡರೆ, ಸ್ನೇಹಾ ನಾಲ್ಕನೇ ಸ್ಥಾನ ಗಳಿಸಿದರು. ಮೈಸೂರಿನ ಪ್ರಣವಿ ಅರಸ್‌ (215) ಐದನೇ ಸ್ಥಾನ ಗಳಿಸಿದರು. ಮೊದಲ ದಿನ ನೀಡಿದ ನೀರಸ ಪ್ರದರ್ಶನ ಪ್ರಣವಿಗೆ ಮುಳುವಾಗಿ ಪರಿಣಮಿಸಿತು. ಆದರೆ ‘ಹೀರೊ ಆರ್ಡರ್‌ ಆಫ್‌ ಮೆರಿಟ್‌’ನಲ್ಲಿ ಪ್ರಣವಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆರನೇ ಸ್ಥಾನದಲ್ಲಿದ್ದ ಸೆಹೆರ್‌ ಈ ಗೆಲುವಿನ ಮೂಲಕ ಎರಡನೇ ಸ್ಥಾನಕ್ಕೇರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.