ಕಾಮನ್‌ವೆಲ್ತ್: ತೇಜಸ್ವಿನ್ ಶಂಕರ್‌ಗೆ ಕೊನೆಗೂ ಒಲಿದ ಅವಕಾಶ ನವದೆಹಲಿ: ಹೈಜಂಪ್ ಅಥ್ಲೀಟ್ ತೇಜಸ್ವಿನ್ ಶಂಕರ್ ಅವರಿಗೆ ಕೊನೆಗೂ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿದೆ. ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ವಿನ್ ಅವರ ಹೆಸರನ್ನು ತಡವಾಗಿ ನೋಂದಾಯಿಸಲಾಗಿದೆ ಎಂದು ಕಾಮನ್‌ವೆಲ್ತ್ ಗೇಮ್ಸ್‌ ಫೆಡರೇಷನ್ (ಸಿಜಿಎಫ್‌) ತಿರಸ್ಕರಿಸಿತ್ತು. ಸುಮಾರು ಒಂದು ತಿಂಗಳಿನಿಂದ ಭಾರತ ಒಲಿಂಪಿಕ್ ಸಂಸ್ಥೆಯು ತೇಜಸ್ವಿನ್ ಅವರನ್ನು ತಂಡಕ್ಕೆ ಸೇರಿಸಲು ಪ್ರಯತ್ನ ನಡೆಸಿತ್ತು. ಕಡೆಗೂ ಈ ಪ್ರಹಸನವು ಶುಕ್ರವಾರ ಸುಖಾಂತ್ಯ ಕಂಡಿತು. ಅತಿಥಿ ನೋಂದಣಿ ಸಭೆ (ಡಿಆರ್‌ಎಂ) ಸಭೆಯಲ್ಲಿ ತೇಜಸ್ವಿನ್ ಸ್ಪರ್ಧೆಗೆ ಅನುಮೋದನೆ ನೀಡಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಶಂಕರ್, ‘ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಇದೊಂದು ಏರಿಳಿತಗಳಿಂದ ಕೂಡಿದ ಸಮಯವಾಗಿತ್ತು. ಈಗಲೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಅಚ್ಚರಿಯೋ, ಆಘಾತವೋ ಎಂದು ಹೇಳಲು ಬರುತ್ತಿಲ್ಲ. ಸಿಕ್ಕಿರುವ ಅವಕಾಶವನ್ನು ಫಲಪ್ರದಗೊಳಿಸಿಕೊಳ್ಳುತ್ತೇನೆ’ ಎಂದರು. ಭಾರತ ಅಥ್ಕೆಟಿಕ್ಸ್ ತಂಡದಲ್ಲಿ ಮೊದಲಿಗೆ ಅವರನ್ನು ಸೇರ್ಪಡೆ ಮಾಡಿರಲಿಲ್ಲ. ಅದನ್ನು ಪ್ರಶ್ನಿಸಿದ್ದ ಶಂಕರ್ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದರ ನಂತರ ಶಂಕರ್ ಅವರನ್ನು ಆರೋಕ್ಯ ರಾಜೀವ ಅವರ ಸ್ಥಾನದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಎಎಫ್‌ಐ ಕೋರ್ಟ್‌ಗೆ ತಿಳಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.