400ಮೀ. ಹರ್ಡಲ್ಸ್‌: ಮೆಕ್ಲಾಫ್ಲಿನ್‌ ವಿಶ್ವದಾಖಲೆ ಯೂಜೀನ್‌, ಅಮೆರಿಕ (ರಾಯಿಟರ್ಸ್‌/ ಎಎಫ್‌ಪಿ): ಹೇವಾರ್ಡ್‌ ಫೀಲ್ಡ್‌ನ ಟ್ರ್ಯಾಕ್‌ನಲ್ಲಿ ಮಿಂಚುಹರಿಸಿದ ಅಮೆರಿಕದ ಸಿಡ್ನಿ ಮೆಕ್ಲಾಫ್ಲಿನ್‌, ಈ ಬಾರಿಯ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿಮೊದಲವಿಶ್ವದಾಖಲೆಸ್ಥಾಪಿಸಿದರು. ಶುಕ್ರವಾರ ನಡೆದ ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಅವರು 50.68 ಸೆ.ಗಳಲ್ಲಿ ಗುರಿತಲುಪಿ ಚಿನ್ನ ಗೆದ್ದರಲ್ಲದೆ, ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು 0.73 ಸೆಕೆಂಡುಗಳಿಂದ ಉತ್ತಮಪಡಿಸಿಕೊಂಡರು. 22 ವರ್ಷದ ಅಥ್ಲೀಟ್‌ ಕಳೆದ ತಿಂಗಳು ಇದೇ ತಾಣದಲ್ಲಿ ನಡೆದಿದ್ದ ಕೂಟದಲ್ಲಿ 51.41 ಸೆ.ಗಳಲ್ಲಿ ಗುರಿತಲುಪಿ ವಿಶ್ವದಾಖಲೆ ನಿರ್ಮಿಸಿದ್ದರು. 400 ಮೀ. ಹರ್ಡಲ್ಸ್‌ ಸ್ಪರ್ಧೆಯನ್ನು 51 ಸೆ.ಗಳ ಒಳಗೆ ಪೂರ್ಣಗೊಳಿಸಿದ ಮೊದಲ ಅಥ್ಲೀಟ್‌ ಎಂಬ ಗೌರವ ಒಲಿಯಿತು. ಒಲಿಂಪಿಕ್‌ ಚಾಂಪಿಯನ್‌ ಕೂಡಾ ಆಗಿರುವ ಮೆಕ್ಲಾಫ್ಲಿನ್‌, ಎರಡನೇ ಸ್ಥಾನ ಪಡೆದ ನೆದರ್ಲೆಂಡ್ಸ್‌ನ ಫೆಮ್ಕೆ ಬೊಲ್‌ (52.27 ಸೆ.) ಅವರನ್ನು ಸಾಕಷ್ಟು ಮೀ.ಗಳ ಅಂತರದಿಂದ ಹಿಂದಿಕ್ಕಿದರು. ಅಮೆರಿಕದ ದಲೀಲಾ ಮುಹಮ್ಮದ್‌ (53.13 ಸೆ.) ಕಂಚು ಗೆದ್ದರು. 2019ರ ಚಾಂಪಿಯನ್‌ ದಲೀಲಾ ಮತ್ತು ಮೆಕ್ಲಾಫ್ಲಿನ್‌ ನಡುವಿನ ಪೈಪೋಟಿಯ ಕಾರಣ ಈ ಸ್ಪರ್ಧೆ ಸಾಕಷ್ಟು ಕುತೂಹಲ ಕೆರಳಿಸಿತ್ತು. ಮೆಕ್ಲಾಫ್ಲಿನ್‌ ಸ್ಪಷ್ಟ ಗೆಲುವಿನ ಮೂಲಕ ಸಾಮರ್ಥ್ಯ ಸಾಬೀತುಪಡಿಸಿದರು. ನಾರ್ಮನ್, ಶಾನೆ ಮಿಲ್ಲರ್‌ಗೆ ಚಿನ್ನ: ಅಮೆರಿಕದ ಮೈಕಲ್‌ ನಾರ್ಮನ್‌ ಮತ್ತು ಬಹಾಮಸ್‌ನ ಶಾನೆ ಮಿಲ್ಲರ್‌ ಅವರು 400 ಮೀ. ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಜಯಿಸಿದರು. ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ನಾರ್ಮನ್ 44.29 ಸೆ.ಗಳಲ್ಲಿ ಗುರಿ ತಲುಪಿದರು. ಮೂರು ಬಾರಿಯ ಒಲಿಂಪಿಕ್ ಪದಕ ವಿಜೇತ ಮತ್ತು 2011ರ ವಿಶ್ವ ಚಾಂಪಿಯನ್‌ ಗ್ರೆನಾಡದ ಕಿರನಿ ಜೇಮ್ಸ್‌ (44.68 ಸೆ.) ಬೆಳ್ಳಿ, ಬ್ರಿಟನ್‌ನ ಮ್ಯಾಥ್ಯೂ ಹಡ್ಸನ್ ಸ್ಮಿತ್‌ (44.66 ಸೆ.) ಕಂಚು ಪಡೆದುಕೊಂಡರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐದನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದ ನಾರ್ಮನ್‌, 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಲು ವಿಫಲರಾಗಿದ್ದರು. ಮಹಿಳೆಯರ ವಿಭಾಗದಲ್ಲಿ ಶಾನೆ ಮಿಲ್ಲರ್‌ 49.11 ಸೆ.ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದುಕೊಂಡರು. ಡೊಮಿನಿಕನ್ ರಿಪಬ್ಲಿಕ್‌ನ ಮೆರಿಲಿಡಿ ಪೌಲಿನೊ 49.60 ಸೆ.ಗಳೊಂದಿಗೆ ಬೆಳ್ಳಿ ಹಾಗೂ ಬಾರ್ಬೆಡಾಸ್‌ನ ಸದಾ ವಿಲಿಯಮ್ಸ್ ಕಂಚು ಗಳಿಸಿದರು. ಕಿಂಬರ್ಲಿಗೆ ಅಗ್ರಸ್ಥಾನ: ಪೆರುವಿನ ಕಿಂಬರ್ಲಿ ಗಾರ್ಸಿಯಾ ಅವರು ಮಹಿಳೆಯರ 35 ಕಿ.ಮೀ. ನಡಿಗೆಯಲ್ಲಿ ಅಗ್ರಸ್ಥಾನ ಪಡೆದುಕೊಂಡರು. ಅವರು 2 ಗಂಟೆ 39.16 ನಿಮಿಷಗಳಲ್ಲಿ ಗುರಿ ತಲುಪಿದರು. ಪೋಲೆಂಡ್‌ನ ಕ್ಯಾಥರಿನಾ ಜೆಲ್ಬೊ ಎರಡನೇ ಹಾಗೂ ಚೀನಾದ ಕ್ವಿಯಾಂಗ್ ಶಿಜಿ ಮೂರನೇ ಸ್ಥಾನ ಪಡೆದರು. 35 ಕಿ.ಮೀ. ನಡಿಗೆ ಸ್ಪರ್ಧೆಯನ್ನು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿ ಏರ್ಪಡಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.