ಕಂಬಳ: ದೂರವಾದ ಸಾಯ್ ಅಂಗಳ ಮಂಗಳೂರು: ತುಳುನಾಡಿನ ನೆಲದ ಸಂಸ್ಕೃತಿಯ ಅಂಗವಾಗಿರುವ ಕಂಬಳದಲ್ಲಿ ದಾಖಲೆಗಳು ಸೃಷ್ಟಿಯಾಗುತ್ತಿದ್ದಂತೆ ಕೆಸರುಗದ್ದೆ ಓಟಗಾರರ ಮೇಲೆ ಕಣ್ಣಿಟ್ಟಿದ್ದ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಆರಂಭದಲ್ಲಿ ತೋರಿಸಿದ್ದ ಉತ್ಸಾಹವನ್ನು ಕಳೆದುಕೊಂಡಿದೆ. ‘ಕಂಬಳ ಅಥ್ಲೀಟ್ಸ್‌’ಗೆ ವಿಶೇಷ ತರಬೇತಿ ನೀಡುವ ಯೋಜನೆಯಿಂದ ಹಿಂದೆ ಸರಿಯಲು ಪ್ರಾಧಿಕಾರ ನಿರ್ಧರಿಸಿದೆ. ಕಂಬಳದಲ್ಲಿ ಕೋಣಗಳ ಜೊತೆ ಓಡುವವರು ಗುರಿ ಮುಟ್ಟಲು ತೆಗೆದುಕೊಂಡ ಸಮಯ ಲೆಕ್ಕ ಹಾಕುವುದರಲ್ಲಿ ಉಂಟಾಗಿರುವ ಗೊಂದಲ ಸಾಯ್ ಅಧಿಕಾರಿಗಳ ಆಸಕ್ತಿಯನ್ನು ಕುಂದಿಸಿತ್ತು. ಇದೇ ಸಂದರ್ಭದಲ್ಲಿ ಕಂಬಳ ಸಮಿತಿ, ಅಕಾಡೆಮಿ ಮತ್ತು ಇತರ ಸಂಘಟಕರ ನಡುವೆ ವೈಮನಸ್ಯ ಉಂಟಾಗಿ ಪರಸ್ಪರ ಆರೋಪ–ಪತ್ಯಾರೋಪಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಪ್ರಾಧಿಕಾರದ ಬೆನ್ನಿಗೆ ಬಿದ್ದು ತರಬೇತಿ ಯೋಜನೆ ಜಾರಿಗೆ ತರುವಂತೆ ಒತ್ತಾಯ ಮಾಡುವ ನೈತಿಕ ಶಕ್ತಿ ಇಲ್ಲದಂತಾಯಿತು. 2019ರಲ್ಲಿ ಐಕಳದಲ್ಲಿ ನಡೆದ ಕಾಂತಬಾರೆ ಬುಧಬಾರೆ ಕಂಬಳದಲ್ಲಿ 9.55 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅಶ್ವತ್ಥಪುರ ಶ್ರೀನಿವಾಸ ಗೌಡ ದಾಖಲೆ ನಿರ್ಮಿಸಿದ್ದರು. ಕಕ್ಕೆಪದವು ಕಂಬಳದಲ್ಲಿ ದಾಖಲಿಸಿದ 8.78 ಸೆಕೆಂಡುಗಳು ಈಗ ಶ್ರೇಷ್ಠ ಕಾಲವಾಗಿ ಉಳಿದಿದೆ. ಈ ಕ್ರೀಡೆಗೆ ದಾಖಲೆಗಳ ಮೆರುಗು ಸಿಗುತ್ತಿದ್ದಂತೆ ಇತರ ಓಟಗಾರರು ಕೂಡ ಮುಂಚೂಣಿಗೆ ಬಂದರು. ಬೈಂದೂರು ವಿಶ್ವನಾಥ ದೇವಾಡಿಗ, ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ ಮುಂತಾದವರ ಹೆಸರೂ ‘ದಾಖಲೆ ಪುಸ್ತಕ’ದಲ್ಲಿ ಸೇರಿಕೊಂಡಿತು. ಕೆಸರುಗದ್ದೆ ಓಟಗಾರರ ವೇಗವನ್ನು ವಿಶ್ವದ ಪ್ರಮುಖ ಅಥ್ಲೀಟ್‌ಗಳ ವೇಗದೊಂದಿಗೆ ಹೋಲಿಸುವ ಪರಿಪಾಠ ಆರಂಭವಾಗುತ್ತಿದ್ದಂತೆ ಆಕ್ಷೇಪಗಳೂ ಕೇಳಿಬಂದವು. ಕಂಬಳದ ‘ಕರೆ’ ಮತ್ತು ಅಥ್ಲೆಟಿಕ್‌ ಟ್ರ್ಯಾಕ್‌ಗಳೆರಡೂ ಭಿನ್ನ, ಅವೆರಡನ್ನು ತಾಳೆ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬಂದವು. ಶ್ರೀನಿವಾಸ ಗೌಡ ಅವರ ದಾಖಲೆಯ ವಿಷಯ ತಿಳಿಯುತ್ತಿದ್ದಂತೆ ಅವರಿಗೆ ವಿಶೇಷ ತರಬೇತಿ ನೀಡಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಮುಂದಾಗಿತ್ತು. ಇದಕ್ಕಾಗಿ ಪ್ರಾಧಿಕಾರದ ಬೆಂಗಳೂರಿನಲ್ಲಿರುವ ದಕ್ಷಿಣ ಭಾರತ ಕೇಂದ್ರಕ್ಕೆ ಅವರನ್ನು ಕರೆಸಿಕೊಳ್ಳುವ ಪ್ರಯತ್ನವನ್ನೂ ಮಾಡಿತ್ತು. ಅದು ಯಶಸ್ವಿಯಾಗಲಿಲ್ಲ. ಪರಿಣಾಮ ಬೀರದ ಲೇಜರ್‌ ಬೀಮ್‌ ಕಾಲದ ಕುರಿತ ಆಕ್ಷೇಪಗಳು ಹೆಚ್ಚುತ್ತಿದ್ದಂತೆ ಲೇಜರ್ ಬೀಮ್ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಲು ನಿರ್ಧರಿಸಲಾಗಿತ್ತು. ಫಿನಿಷಿಂಗ್ ಪಾಯಿಂಟ್‌ನಲ್ಲಿ ಮಾತ್ರವಿದ್ದ ಲೇಸರ್ ಬೀಮ್, ಸ್ಟಾರ್ಟಿಂಗ್ ಪಾಯಿಂಟ್‌ಗೂ ಲಗ್ಗೆ ಇರಿಸಿತು. ಕಾಸರಗೋಡಿನ ಪೈವಳಿಕೆಯಲ್ಲಿ ನಡೆದ ‘ಅಣ್ಣ–ತಮ್ಮ ಜೋಡುಕರೆ‘ ಕಂಬಳದಲ್ಲಿ ಲೇಸರ್‌ ಬೀಮ್ ಅಳವಡಿಸಿ ‘ಕಾಲ’ ಗಣನೆ ಮಾಡುವ ವಿಷಯ ತಿಳಿದುಸಾಯ್ ದಕ್ಷಿಣ ಕೇಂದ್ರದ ನಿರ್ದೇಶಕ ಅಜಯ್ ಕುಮಾರ್ ಬೆಹಲ್ ನೇತೃತ್ವದ ಮೂವರ ತಂಡ ಅಲ್ಲಿಗೆ ತೆರಳಿತ್ತು. ಶಿಸ್ತುಬದ್ಧ ತರಬೇತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಆದರೆ ನಂತರ ಯಾವ ಬೆಳವಣಿಗೆಯೂ ನಡೆದಿಲ್ಲ. ‘ಆರಂಭದಲ್ಲಿ ಕಂಬಳದ ಬಗ್ಗೆ ಕುತೂಹಲ ಮೂಡಿದ್ದು ನಿಜ. ಆದರೆ ಕ್ರಮೇಣ ಆಸಕ್ತಿ ಕಳೆದುಕೊಂಡೆವು. ಕೋಣನ ಜೊತೆಗೆ ಓಡುವುದಕ್ಕೂ ಟ್ರ್ಯಾಕ್‌ನಲ್ಲಿ ಓಡುವುದಕ್ಕೂ ಅಜಗಜಾಂತರವಿದೆ ಎಂಬುದು ನಿಧಾನಕ್ಕೆ ಮನವರಿಕೆಯಾಯಿತು. ಕೇಂದ್ರ ಕಚೇರಿಗೆ ಕಳುಹಿಸಿದ ಪ್ರಸ್ತಾಪಕ್ಕೆ ಸೂಕ್ತ ಪ್ರತಿಕ್ರಿಯೆಯೂ ಸಿಗಲಿಲ್ಲ. ಆದ್ದರಿಂದ ಆ ಅಧ್ಯಾಯ ಅಲ್ಲಿಗೇ ನಿಂತುಹೋಗಿದೆ’ ಎಂದು ಸಾಯ್ ಕೋಚ್ ಒಬ್ಬರು ತಿಳಿಸಿದರು. ಉಸೇನ್ ಬೋಲ್ಟ್‌ ದಾಖಲೆಯನ್ನೇ ಶ್ರೀನಿವಾಸಗೌಡ ಮುರಿದಿದ್ದಾರೆ ಎಂದಾದರೆ ಅವರು ಈಗ ವಿಶ್ವದ ಅತ್ಯುತ್ತಮ ಓಟಗಾರನಾಗಿ ರಾಷ್ಟ್ರದ ಗೌರವ ಹೆಚ್ಚಿಸಬೇಕಿತ್ತಲ್ಲವೇ? ಅದು ಆಗಿಲ್ಲ ಎಂದಾದರೆ ಅವರ ದಾಖಲೆ ಕಟ್ಟುಕತೆ ಎಂದೇ ಅರ್ಥವಲ್ಲವೇ? ಮುಚ್ಚೂರು ಲೋಕೇಶ್ ಶೆಟ್ಟಿ ಕಂಬಳ ಸಮಿತಿ ಆಜೀವ ಸದಸ್ಯ ಟಿವಿ ಚಾನಲ್‌ನ ಸ್ಟುಡಿಯೊದಲ್ಲಿ ಕುಳಿತು ಕಂಬಳದ ಓಟಗಾರರನ್ನು ಅಥ್ಲೀಟ್‌ಗಳೊಂದಿಗೆ ಹೋಲಿಸಿದವರು ಈಗ ಅದೇ ವಿಷಯಕ್ಕೆ ಸಂಬಂಧಿಸಿ ನನ್ನ ಮೇಲೆ ಆರೋಪ ಹೊರಿಸುತ್ತಿರುವುದು ವಿಚಿತ್ರ. ಗುಣಪಾಲ ಕಡಂಬ ಕಂಬಳ ಅಕಾಡೆಮಿ ಸ್ಥಾಪಕ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.