ಬಾಜಾಸ್‌ ರೇಸ್‌ಗೆ ಐಶ್ವರ್ಯ ತಯಾರಿ ಟೆರುಲ್‌, ಸ್ಪೇನ್‌: ಸ್ಪೇನ್‌ನಲ್ಲಿ ಆರಂಭವಾಗಲಿರುವ ಬಾಜಾಸ್ ಮೋಟರ್ ಸ್ಪೋರ್ಟ್ಸ್‌ನಲ್ಲಿ ಪಾಲ್ಗೊಳ್ಳಲು ಭಾರತದ ಐಶ್ವರ್ಯ ಪಿಸೆ ತಯಾರಿ ನಡೆಸಿದ್ದಾರೆ. ಎಫ್‌ಐಎಂ ಬಾಜಾಸ್‌ ವಿಶ್ವಕಪ್‌ನ ನಾಲ್ಕನೇ ಸುತ್ತಿನ ರೇಸ್‌ ‘ಬಾಜಾ ಆ್ಯರಗನ್‌’ ಶುಕ್ರವಾರ ಇಲ್ಲಿ ಆರಂಭವಾಗಲಿದೆ. ‘ಶೆರ್ಕೊ ಟಿವಿಎಸ್‌ ರ‍್ಯಾಲಿ ಫ್ಯಾಕ್ಟರಿ’ ತಂಡವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರಿನ ಪಿಸೆ, ಒಂದೂವರೆ ವರ್ಷದ ಬಿಡುವಿನ ಬಳಿಕ ಮೊದಲ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 2021ರ ಮಾರ್ಚ್‌ನಲ್ಲಿ ಜೋರ್ಡಾನ್‌ನಲ್ಲಿ ನಡೆದ ಬಾಜಾ ರೇಸ್‌ನಲ್ಲಿ ಅಪಘಾತಕ್ಕೆ ಒಳಗಾಗಿ ಅವರು ಗಾಯಗೊಂಡಿದ್ದರು. ಚೇತರಿಸಿಕೊಂಡ ಬಳಿಕ ರಾಷ್ಟ್ರೀಯ ಮೋಟರ್‌ ಸ್ಪೋರ್ಟ್ಸ್‌ ರ‍್ಯಾಲಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ಜಯಿಸಿದ್ದರು. ಫಿಟ್‌ನೆಸ್‌ ಹೆಚ್ಚಿಸಲು ಮತ್ತು ಚಾಲನಾ ಕೌಶಲ ಉತ್ತಮಪಡಿಸಿಕೊಳ್ಳಲು ಪಿಸೆ, ಫ್ರಾನ್ಸ್‌ ಹಾಗೂ ಸ್ಪೇನ್‌ನಲ್ಲಿ 90 ದಿನಗಳ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಪಿಸೆ ಅವರು ‘ಬಾಜಾ ಆ್ಯರಗನ್‌’ ರೇಸ್‌ನಲ್ಲಿ ತಮ್ಮ ‘ಶೆರ್ಕೊ 450 ಎಂಡುರೊ’ ಬೈಕ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ತರಬೇತಿಯ ವೇಳೆಯಲ್ಲೂ ಇದೇ ಬೈಕ್‌ ಬಳಕೆ ಮಾಡಿದ್ದರು. ಟಿವಿಎಸ್‌ ತಂಡದಲ್ಲಿ ಲೊರೆಂಜೊ ಸ್ಯಾಂಟೋಲಿನೊ, ರೂಯಿ ಗೊನ್ಸಾಲ್ವೆಸ್‌ ಮತ್ತು ಹರಿತ್‌ ನೋಹ್‌ ಇದ್ದಾರೆ. ಐದು ಬಾರಿಯ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ ಆಗಿರುವ ಪಿಸೆ, 2018 ರಲ್ಲಿ ಬಾಜಾ ಸ್ಪೇನ್‌ನಲ್ಲಿ ಪಾಲ್ಗೊಂಡು ಅಂತರರಾಷ್ಟ್ರೀಯ ರೇಸ್‌ಗೆ ಪದಾರ್ಪಣೆ ಮಾಡಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಮೋಟರ್‌ ಸ್ಪೋರ್ಟ್ಸ್‌ ಬೈಕ್‌ ಚಾಲಕಿ ಎನಿಸಿಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.