ಕಾಮನ್‌ವೆಲ್ತ್ ಕೂಟ: ವೈಯಕ್ತಿಕ ಚಿನ್ನದ ಮೇಲೆ ಸತ್ಯನ್ ಕಣ್ಣು ಬೆಂಗಳೂರು: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಈ ಬಾರಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ವಿಶ್ವಾಸವಿದೆ ಎಂದು ಭಾರತದ ಟೇಬಲ್ ಟೆನಿಸ್ ಆಟಗಾರ ಜಿ. ಸತ್ಯನ್ ಹೇಳಿದ್ದಾರೆ. ‘ಭಾರತ ತಂಡದಲ್ಲಿ ಈ ಸಲ ಅನುಭವಿ ಮತ್ತು ಯುವ ಆಟಗಾರರು ಇದ್ದಾರೆ. ನಾನು 2018ರಲ್ಲಿ ಮೊದಲ ಬಾರಿ ಕಾಮನ್‌ವೆಲ್ತ್ ಕೂಟದಲ್ಲಿ ಆಡಿದ್ದೆ. ಆಗ ನಮ್ಮ ತಂಡವು ಪದಕ ಜಯಿಸಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಉತ್ತಮ ತರಬೇತಿ ಮತ್ತು ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಆಡಿದ ಅನುಭವ ನನ್ನ ಆತ್ಮವಿಶ್ವಾಸವನ್ನು ವೃದ್ಧಿಸಿದೆ. ಕೌಶಲಗಳನ್ನೂ ಸುಧಾರಿಸಿಕೊಂಡಿದ್ದೇನೆ. ಆದ್ದರಿಂದ ವೈಯಕ್ತಿಕ ವಿಭಾಗದಲ್ಲಿಯೂ ಗೆಲ್ಲುವ ಭರವಸೆ ಮೂಡಿದೆ’ ಎಂದು ಸತ್ಯನ್ ಸೋನಿ ಸ್ಪೋರ್ಟ್ಸ್‌ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಹೇಳಿದರು. ‘ಅಚಂತ ಶರತ್ ಕಮಲ್ ತಂಡದಲ್ಲಿಯೇ ಅತ್ಯಂತ ಹೆಚ್ಚು ಅನುಭವಿ ಆಟಗಾರ. ಇಡೀ ತಂಡದ ಒತ್ತಡವನ್ನು ತಮ್ಮ ಮೇಲೆ ಹಾಕಿಕೊಂಡು ಉಳಿದವರನ್ನು ನಿರಾಳ ಮಾಡುವ ಸಮರ್ಥರು. ತಮ್ಮ ಅನುಭವದ ಆಧಾರದಲ್ಲಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾರೆ. ನಮ್ಮ ಕೌಶಲಗಳಿಗೆ ಸಾಣೆ ಹಿಡಿಯುತ್ತಾರೆ. ಒತ್ತಡದ ಸನ್ನಿವೇಶದಲ್ಲಿ ತಂತ್ರಗಾರಿಕೆ ಹೆಣೆಯುವ ಮೂಲಕ ತಂಡವನ್ನು ಜಯದತ್ತ ನಡೆಸುತ್ತಾರೆ. ಅವರು ಇರುವುದು ನಮ್ಮೆಲ್ಲರ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿದೆ’ ಎಂದರು. ‘ಫಿಟ್‌ನೆಸ್‌ ನಿರ್ವಹಣೆಯಲ್ಲಿಯೂ ಭಾರತದ ಟಿಟಿ ಆಟಗಾರರು ಬಹಳಷ್ಟು ಸುಧಾರಣೆ ಮಾಡಿಕೊಂಡಿದ್ದಾರೆ. ಚೀನಾ, ಜಪಾನ್ , ಕೊರಿಯಾದ ಆಟಗಾರರನ್ನೂ ಸಮರ್ಥವಾಗಿ ಎದುರಿಸಬಲ್ಲ ವಿಶ್ವಾಸ ಮೂಡಿದೆ. ನನ್ನ ಆಟದಲ್ಲಿ ವೇಗಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದೇನೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.