ನಾಕ್ ಔಟ್ ಹಂತದತ್ತ ದಾವಣಗೆರೆ ತಂಡ ಹಿರಿಯೂರು: ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ರಾತ್ರಿಯಿಂದ ಆರಂಭವಾಗಿರುವ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಹೊನಲು–ಬೆಳಕಿನ ದೀಪಾಲಂಕೃತ ಕೊಕ್ಕೊ ಅಸೋಸಿಯೇಷನ್ ಕಪ್–2022 ಪಂದ್ಯಾವಳಿಯಲ್ಲಿ ಶನಿವಾರ ದಾವಣಗೆರೆ ಹಾಗೂ ದಕ್ಷಿಣಕನ್ನಡದ ಪುರುಷರ ತಂಡಗಳು ಎರಡೆರಡು ತಂಡಗಳ ವಿರುದ್ಧ ಜಯ ಸಾಧಿಸುವ ಮೂಲಕ ನಾಕ್ ಔಟ್‌ನತ್ತ ಹೆಜ್ಜೆ ಹಾಕಿವೆ. ಪುರುಷರ ವಿಭಾಗದಲ್ಲಿ ನಡೆದ ಒಟ್ಟು 17 ಪಂದ್ಯಗಳಲ್ಲಿ ದಾವಣಗೆರೆ ತಂಡ ಯಾದಗಿರಿ ತಂಡವನ್ನು 11–07 ಅಂಕಗಳಿಂದ, ಮತ್ತೊಂದು ಪಂದ್ಯದಲ್ಲಿ ವಿಜಯನಗರ ತಂಡವನ್ನು 12–03 ಅಂಕಗಳ ಭಾರಿ ಅಂತರದಿಂದ ಮಣಿಸಿತು. ದಕ್ಷಿಣಕನ್ನಡದ ತಂಡ ಚಿಕ್ಕಬಳ್ಳಾಪುರ ತಂಡವನ್ನು 14–05 ಅಂಕಗಳಿಂದ ಹಾಗೂ ಕೋಲಾರ ತಂಡವನ್ನು 10–08 ಅಂಕಗಳಿಂದ ಮಣಿಸಿ ನಾಕ್ ಔಟ್‌ನತ್ತ ಸಾಗಿದವು. ಬಳ್ಳಾರಿ ತಂಡದವರು ಹಾವೇರಿ ತಂಡವನ್ನು 11–08, ಮಂಡ್ಯ ತಂಡ ಚಿತ್ರದುರ್ಗ ತಂಡವನ್ನು 11–10, ಬೆಳಗಾವಿ ತಂಡ ಯಾದಗಿರಿ ತಂಡವನ್ನು 17–06 ಅಂಕಗಳಿಂದ, ಮೈಸೂರು ತಂಡ ವಿಜಯನಗರವನ್ನು 12–08, ಶಿವಮೊಗ್ಗ ತಂಡ ಪೊಲೀಸ್ ತಂಡವನ್ನು 12–11, ಬೆಂಗಳೂರು ನಗರ ತಂಡ ಹಾವೇರಿಯನ್ನು 20–05, ಚಿತ್ರದುರ್ಗ ತಂಡ ವಿಜಯಪುರ ತಂಡವನ್ನು 17–11, ತುಮಕೂರು ತಂಡ ಬಳ್ಳಾರಿ ತಂಡವನ್ನು 10–08, ಕೋಲಾರ ತಂಡ ಹಾಸನ ತಂಡವನ್ನು 12–11, ಮೈಸೂರು ತಂಡ ಬೆಳಗಾವಿ ತಂಡವನ್ನು 17–13, ಶಿವಮೊಗ್ಗ ತಂಡ ವಿಜಯಪುರ ತಂಡವನ್ನು 9 –7 ಅಂಕಗಳಿಂದ ಮಣಿಸಿದರೆ, ಬೆಂಗಳೂರು ನಗರ ತಂಡ ಹಾಸನ ತಂಡವನ್ನು 10–08 ಅಂಕಗಳಿಂದ ಮಣಿಸಿತು. ದಾವಣಗೆರೆ ತಂಡ ಅತಿಥೇಯ ನ್ಯೂ ಡೈಮಂಡ್ ತಂಡವನ್ನು 20–05 ಅಂಕಗಳಿಂದ ಪರಾಭವಗೊಳಿಸಿತು. ಮಹಿಳಾ ತಂಡ; ದಕ್ಷಿಣ ಕನ್ನಡ ಮೇಲುಗೈ: ಮಹಿಳೆಯರ ವಿಭಾಗದಲ್ಲಿ ನಡೆದ ಏಳು ಪಂದ್ಯಗಳಲ್ಲಿ ದಕ್ಷಿಣ ಕನ್ನಡದ ತಂಡ ತುಮಕೂರು ತಂಡವನ್ನು 16–05 ಹಾಗೂ ಚಿತ್ರದುರ್ಗ ತಂಡವನ್ನು 12–02 ಅಂಕಗಳ ಭಾರಿ ಅಂತರದಿಂದ ಸೋಲಿಸಿತು. ಬೆಂಗಳೂರು ನಗರ ತಂಡ ಚಿತ್ರದುರ್ಗ ತಂಡವನ್ನು 73–10, ಮಂಡ್ಯ ತಂಡ ಬಳ್ಳಾರಿ ತಂಡವನ್ನು 11–04, ಮೈಸೂರು ತಂಡ ಬಳ್ಳಾರಿ ತಂಡವನ್ನು 20–02, ಮಂಡ್ಯ ತಂಡ ರಾಯಚೂರು ತಂಡವನ್ನು 7–6 ಅಂಕಗಳಿಂದ ಮಣಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.