| ಟೇಬಲ್ ಟೆನಿಸ್: ಭಾರತ ತಂಡ ಶುಭಾರಂಭ ಬರ್ಮಿಂಗ್‌ಹ್ಯಾಮ್‌: ಮಣಿಕಾ ಬಾತ್ರಾ ನೇತೃತ್ವದ ಭಾರತ ಮಹಿಳಾ ಟೇಬಲ್ ಟೆನಿಸ್ ತಂಡವು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶುಕ್ರವಾರ ಶುಭಾರಂಭ ಮಾಡಿತು. ಇಲ್ಲಿ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು 3–0ಯಿಂದ ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸಿದರು. ಡಬಲ್ಸ್ ಪಂದ್ಯದಲ್ಲಿ ಶ್ರೀಜಾ ಅಕುಲಾ ಮತ್ತು ರೀತ್ ಟೆನಿಸನ್‌11-7, 11-7, 11-5ರಿಂದ ಲೈಲಾ ಎಡ್ವರ್ಡ್ಸ್ ಮತ್ತು ದನೀಶಾ ಪಟೇಲ್ ಗೆದ್ದು 1–0 ಮುನ್ನಡೆ ಗಳಿಸಿಕೊಟ್ಟರು. ಕಾಮನ್‌ವೆಲ್ತ್ ಗೇಮ್ಸ್ಹಾಲಿ ಚಾಂಪಿಯನ್‌ ಮಣಿಕಾ ಬಾತ್ರಾ, ಸಿಂಗಲ್ಸ್ ಹಣಾಹಣಿಯಲ್ಲಿ 11-5, 11-3, 11-2ರಿಂದ ಮುಶ್ಫೀಕ್ ಕಲಾಮ್ ಅವರನ್ನು ಸುಲಭವಾಗಿ ಮಣಿಸಿದರು. ಸಿಂಗಲ್ಸ್‌ನ ಮತ್ತೊಂದು ಸೆಣಸಾಟದಲ್ಲಿ ಅಕುಲಾ11-5, 11-3, 11-6ರಿಂದ ದನಿಶಾ ಪಟೇಲ್ ವಿರುದ್ಧ ಗೆದ್ದು ಬೀಗಿದರು. ಪುರುಷರ ತಂಡ ಜಯಭೇರಿ: ಮೂರನೇ ಗುಂಪಿನ ಹಣಾಹಣಿಯಲ್ಲಿ ಭಾರತ ಪುರುಷರ ತಂಡವು 3–0ಯಿಂದ ದುರ್ಬಲ ಬಾರ್ಬಡೀಸ್ ತಂಡಕ್ಕೆ ಸೋಲುಣಿಸಿತು. ಡಬಲ್ಸ್‌ನಲ್ಲಿ ಹರ್ಮೀತ್ ದೇಸಾಯಿ– ಜಿ.ಸತ್ಯನ್‌11-9, 11-9, 11-4ರಿಂದ ಕೆವಿನ್‌ ಫೆರ್ಲಿ ಮತ್ತು ಟೈರೆಸ್‌ ನೈಟ್‌ ಎದುರು ಗೆದ್ದರೆ, ಸಿಂಗಲ್ಸ್‌ನಲ್ಲಿ ಶರತ್ ಕಮಲ್‌11-5, 11-3, 11-3ರಿಂದ ರಾಮೊನ್ ಮ್ಯಾಕ್ಸ್‌ವೆಲ್ ಎದುರು ಸುಲಭವಾಗಿ ಜಯಿಸಿದರು. ಸಿಂಗಲ್ಸ್ ವಿಭಾಗದ ಮತ್ತೊಂದು ಹಣಾಹಣಿಯಲ್ಲಿ ಸತ್ಯನ್‌11-4, 11-4, 11-5ರಿಂದ ಟೈರೆಸ್‌ ಎದುರು ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.