ಮ್ಯಾರಥಾನ್‌: ಕಿಪ್ಲಂಗಟ್, ಜೆಸ್ಸಿಕಾಗೆ ಚಿನ್ನ ಬರ್ಮಿಂಗ್‌ಹ್ಯಾಮ್ (ಪಿಟಿಐ/ ಎಎಫ್‌ಪಿ): ಉಗಾಂಡದ ವಿಕ್ಟರ್‌ ಕಿಪ್ಲಂಗಟ್‌ ಮತ್ತು ಆಸ್ಟ್ರೇಲಿಯಾದ ಜೆಸ್ಸಿಕಾ ಸ್ಟೆನ್ಸನ್ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಮ್ಯಾರಥಾನ್‌ ಚಿನ್ನ ಗೆದ್ದುಕೊಂಡರು. ಶನಿವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಕಿಪ್ಲಂಗಟ್‌ ಅವರು 42 ಕಿ.ಮೀ ದೂರವನ್ನು 2 ಗಂಟೆ 10.55 ನಿಮಿಷಗಳಲ್ಲಿ ಕ್ರಮಿಸಿದರು. ಕಿಪ್ಲಂಗಟ್‌ ಓಟದ ವೇಳೆ ಸುಮಾರು ಒಂದು ಮೈಲಿಯಷ್ಟು ತಪ್ಪು ದಾರಿಯಲ್ಲಿ ಓಡಿದ್ದರು. ಆದರೂ ಸುಧಾರಿಸಿಕೊಂಡು ಮೊದಲ ಸ್ಥಾನ ಪಡೆಯಲು ಯಶಸ್ವಿಯಾದರು. ಕಾಮನ್‌ವೆಲ್ತ್‌ ಕೂಟದ ಮ್ಯಾರಥಾನ್‌ನಲ್ಲಿ ಉಗಾಂಡ ಚಿನ್ನ ಜಯಿಸಿದ್ದು ಇದೇ ಮೊದಲು. ತಾಂಜಾನಿಯದ ಫೆಲಿಕ್ಸ್‌ ಸಿಂಬು (2 ಗಂ. 12.29 ನಿ.) ಬೆಳ್ಳಿ ಹಾಗೂ ಕೆನ್ಯಾದ ಮೈಕಲ್ ಮುಗೊ ಗಿತಯೆ (2 ಗಂ. 13.16 ನಿ.) ಕಂಚು ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಜೆಸ್ಸಿಕಾ 2 ಗಂ. 27.31 ನಿ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು. ಕೆನ್ಯಾದ ಮಾರ್ಗರೆಟ್‌ ವಂಗರಿ ಮರಿಯುಕಿ (2 ಗಂ. 28 ನಿ.) ಮತ್ತು ನಮೀಬಿಯಾದ ಹೆಲಾಲಿಯ ಯೊಹಾನೆಸ್ (2 ಗಂ. 28.39 ನಿ.) ಕ್ರಮವಾಗಿ ಬೆಳ್ಳಿ ಹಾಗೂ ಚಿನ್ನ ಗೆದ್ದರು. ನಿತೇಂದ್ರಗೆ 12ನೇ ಸ್ಥಾನ: ಪುರುಷರ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ನಿತೇಂದ್ರ ಸಿಂಗ್‌ ರಾವತ್‌ 12ನೇ ಸ್ಥಾನ ಪಡೆದರು. ಅವರು 2 ಗಂಟೆ 19.22 ನಿಮಿಷಗಳಲ್ಲಿ ಗುರಿ ತಲುಪಿದರು. ಚಿನ್ನ ಗೆದ್ದ ಸ್ಪರ್ಧಿಗಿಂತ 8.27 ನಿಮಿಷಗಳಷ್ಟು ತಡವಾಗಿ ಸ್ಪರ್ಧೆ ಕೊನೆಗೊಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.