ಭಾರತ ಮಹಿಳೆಯರ ಐತಿಹಾಸಿಕ ಸಾಧನೆ ಬರ್ಮಿಂಗ್‌ಹ್ಯಾಮ್‌: ಭಾರತ ಮಹಿಳಾ ತಂಡದವರು ಲಾನ್‌ಬಾಲ್ಸ್‌ ಸ್ಪರ್ಧೆಯ ಫೋರ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್‌ ಕೂಟದ ಲಾನ್‌ಬಾಲ್ಸ್‌ನಲ್ಲಿ ಭಾರತ ಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು. ಮಂಗಳವಾರ ನಡೆಯಲಿರುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಸವಾಲು ಎದುರಿಸಲಿದೆ. ಚಿನ್ನ ಅಥವಾ ಬೆಳ್ಳಿ ಖಚಿತಪಡಿಸಿರುವ ಭಾರತ ತಂಡ ಇದೇ ಮೊದಲ ಬಾರಿ ಚೊಚ್ಚಲ ಪದಕಕ್ಕೆ ಮುತ್ತಿಡಲಿದೆ. ಸೋಮವಾರ ನಡೆದ ಸೆಮಿಫೈನಲ್‌ನಲ್ಲಿ ಲವ್ಲಿ ಚೌಬೆ, ಪಿಂಕಿ, ನಯನ್ಮೊನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕೆ ಅವರನ್ನೊಳಗೊಂಡ ಭಾರತ 16–13 ರಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತು. ‘ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಸಂಘಟಿತ ಪ್ರಯತ್ನದಿಂದ ಫೈನಲ್‌ ಪ್ರವೇಶಿಸಿದ್ದೇವೆ. ಆದರೆ ನಮ್ಮ ಪಯಣ ಇಲ್ಲಿಗೆ ಕೊನೆಗೊಂಡಿಲ್ಲ. ದಕ್ಷಿಣ ಆಫ್ರಿಕಾ ತಂಡದ ಎದುರೂ ಇದೇ ಪ್ರದರ್ಶನ ಮುಂದುವರಿಸಿ ಚಿನ್ನ ಗೆಲ್ಲಲು ಪ್ರಯತ್ನಿಸುತ್ತೇವೆ‘ ಎಂದು ಸ್ಪರ್ಧೆಯ ಬಳಿಕ ರಾಣಿ ಟಿರ್ಕೆ ಪ್ರತಿಕ್ರಿಯಿಸಿದರು. ನ್ಯೂಜಿಲೆಂಡ್‌ ಎದುರಿನ ಹಣಾಹಣಿಯ ಆರಂಭದಲ್ಲಿ ಭಾರತ 0–5 ರಲ್ಲಿ ಹಿನ್ನಡೆಯಲ್ಲಿತ್ತು. ಸೆಲಿನಾ ಗೊಡಾರ್ಡ್‌, ನಿಕೋಲ್ ಟೂಮಿ, ಟೇಯ್ಲ್ ಬ್ರೂಸ್ ಮತ್ತು ವಾಲ್‌ ಸ್ಮಿತ್‌ ಅವರು ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮರುಹೋರಾಟ ನಡೆಸಿದ ಭಾರತ 7–7ರಲ್ಲಿ ಸಮಬಲ ಸಾಧಿಸಿತು. ಆ ಬಳಿಕವೂ ಗುರಿ ಹಿಡಿಯುವಲ್ಲಿ ನಿಖರ ಪ್ರದರ್ಶನ ಮುಂದುವರಿಸಿ 10–7 ರಲ್ಲಿ ಮುನ್ನಡೆ ಗಳಿಸಿತು. ಪಟ್ಟುಬಿಡದ ನ್ಯೂಜಿಲೆಂಡ್ 13–12ರಲ್ಲಿ ಮತ್ತೆ ಮುನ್ನಡೆ ತನ್ನದಾಗಿಸಿಕೊಂಡಿತು. ಆದರೆ ಕೊನೆಯಲ್ಲಿ ರಾಣಿ ಅವರ ಅತ್ಯುತ್ತಮ ಪ್ರದರ್ಶನದಿಂದ ಭಾರತ 16–13 ರಲ್ಲಿ ಗೆದ್ದಿತು. ಭಾರತ ಪುರುಷರ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ 8–26 ರಲ್ಲಿ ನಾರ್ತರ್ನ್‌ ಐರ್ಲೆಂಡ್‌ ಎದುರು ಸೋತು ಹೊರಬಿದ್ದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.