ಜೂನಿಯರ್ ಏಷ್ಯಾ ಕಪ್ ಹಾಕಿ: ಸೆಮಿಗೆ ಭಾರತ ಸಲಾಲ, ಒಮನ್‌: ಹಾಲಿ ಚಾಂಪಿಯನ್ ಭಾರತ ತಂಡವು ಪುರುಷರ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 17–0ಯಿಂದ ಥಾಯ್ಲೆಂಡ್ ವಿರುದ್ಧ ಜಯಿಸಿತು. ಅದರೊಂದಿಗೆ ಒಟ್ಟು ಹತ್ತು ಅಂಕ ಗಳಿಸಿ ನಾಲ್ಕನೇ ಘಟ್ಟ ಪ್ರವೇಶಿಸಿತು. ಭಾರತ ತಂಡದ ಅಂಗದ್ ವೀರ್ ಸಿಂಗ್ ಈ ಪಂದ್ಯದಲ್ಲಿ ನಾಲ್ಕು ಗೋಲು (13ನಿ, 33ನಿ, 47ನಿ ಹಾಗೂ 55ನಿ) ಗಳಿಸಿದರು. ಅಂಗದ್ ಅವರಲ್ಲದೇ ಭಾರತದ ಯೋಗೆಂಬರ್ ರಾವತ್ (17ನಿ), ನಾಯಕ ಉತ್ತಮ್ ಸಿಂಗ್ (24ನಿ, 31ನಿ), ಅಮನದೀಪ್ ಲಾಕ್ರಾ (26ನಿ, 29ನಿ), ಅರೈಜಿತ್ ಸಿಂಗ್ ಹುಂಡಾಲ್ (36ನಿ), ವಿಷ್ಣುಕಾಂತ್ ಸಿಂಗ್ (38ನಿ), ಬಾಬಿ ಸಿಂಗ್ ಧಾಮಿ (45ನಿ), ಶಾರದಾನಂದ ತಿವಾರಿ (46ನಿ), ಅಮನದೀಪ್ (47ನಿ), ರೋಹಿತ್ (49ನಿ), ನುನಿತ್ ಲಾಕ್ರಾ (54ನಿ) ಮತ್ತು ರಾಜಿಂದರ್ ಸಿಂಗ್ (56ನಿ) ಗೋಲು ಗಳಿಸಿದರು. ಈ ಪಂದ್ಯಕ್ಕೂ ಮುನ್ನ ಭಾರತ ತಂಡವು ಚೈನಿಸ್ ತೈಪೆ, ಜಪಾನ್ ವಿರುದ್ಧ ಗೆದ್ದಿತ್ತು. ಪಾಕಿಸ್ತಾನ ಎದುರಿನ ಹಣಾಹಣಿಯು ಡ್ರಾ ಆಗಿತ್ತು. ಬಿ ಗುಂಪಿನಲ್ಲಿ ನಡೆಯಲಿರುವ ಒಮನ್ ಮತ್ತು ಮಲೇಷ್ಯಾ ಪಂದ್ಯ ಹಾಗೂ ಎ ಗುಂಪಿನಲ್ಲಿ ಜಪಾನ್ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ನಂತರವಷ್ಟೇ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಮುಖಾಮುಖಿಯಾಗುವ ತಂಡವು ಖಚಿತಗೊಳ್ಳಲಿದೆ. ಥಾಯ್ಲೆಂಡ್ ಎದುರಿನ ಪಂದ್ಯದಲ್ಲಿ ಭಾರತ ತಂಡವು ಸಂಪೂರ್ಣ ಪಾರಮ್ಯ ಮೆರೆಯಿತು. ಮೊದಲ ಕ್ವಾರ್ಟರ್‌ನಲ್ಲಿ ಅಂಗದ್ ಗೋಲು ಖಾತೆ ತೆರೆದರು. ಅಂತಿಮ ಕ್ವಾರ್ಟರ್‌ ಅಷ್ಟೊತ್ತಿಗೆ ಭಾರತ ತಂಡವು 10–0 ಮುನ್ನಡೆ ಸಾಧಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.